ಕಳೆದ ವರ್ಷ 165 ದೋಷಿಗಳಿಗೆ ಮರಣದಂಡನೆ ವಿಧಿಸಿದ ವಿಚಾರಣಾ ನ್ಯಾಯಾಲಯ: ವರದಿ

Update: 2023-01-30 17:18 GMT

ಹೊಸದಿಲ್ಲಿ, ಜ. 30: ದೇಶಾದ್ಯಂತದ ವಿಚಾರಣಾ ನ್ಯಾಯಾಲಯಗಳು 2022ರಲ್ಲಿ 165 ದೋಷಿಗಳಿಗೆ ಮರಣದಂಡನೆ ವಿಧಿಸಿದೆ. ಇದು 2000ರಿಂದ ಒಂದೇ ವರ್ಷ ನೀಡಿರುವ ಅತ್ಯಧಿಕ ಮರಣ ದಂಡನೆ ಎಂದು ಕ್ರಿಮಿನಲ್ ರಿಫಾರ್ಮ್ಸ್ ಅಡ್ವೊಕೆಸಿ ಗ್ರೂಪ್ ಪ್ರೊಜೆಕ್ಟ್ 39 ಸೋಮವಾರ ಬಿಡುಗಡೆ ಮಾಡಿದ ವರದಿ ಹೇಳಿದೆ. 

ಕಳೆದ ವರ್ಷ ಅಂತ್ಯದ ಒಳಗೆ ಭಾರತದಲ್ಲಿ 539 ದೋಷಿಗಳು ಮರಣದಂಡನೆಗೆ ಗುರಿಯಾಗಿದ್ದರು. ಇದು 2004ರಿಂದ ಅತ್ಯಧಿಕ ಎಂದು ‘ಡೆತ್ ಪೆನಲ್ಟಿ ಇನ್ ಇಂಡಿಯಾ: ಆ್ಯನುವಲ್ ಸ್ಟೆಟಿಸ್ಟಿಕ್ ರಿಪೋರ್ಟ್ 2022’ ಹೆಸರಿನ ವರದಿ ಹೇಳಿದೆ. ವಿಚಾರಣಾ ನ್ಯಾಯಾಲಯಗಳು ವಿಧಿಸುವ ಮರಣದಂಡನೆಯಲ್ಲಿ ಹೆಚ್ಚಳ ಹಾಗೂ ಉನ್ನತ ನ್ಯಾಯಾಲಯಗಳು ಕಡಿಮೆ ಮೇಲ್ಮನವಿಗಳ ವಿಚಾರಣೆ ನಡೆಸುತ್ತಿರುವುದು ಇದಕ್ಕೆ ಕಾರಣ ಎಂದು ವರದಿ ಹೇಳಿದೆ. 

ಅತ್ಯಧಿಕ ಸಂಖ್ಯೆಯಲ್ಲಿ ಮರಣದಂಡನೆ ಎದುರಿಸುತ್ತಿರುವ ದೋಷಿಗಳಿರುವ ರಾಜ್ಯಗಳಲ್ಲಿ ಉತ್ತರಪ್ರದೇಶ ಮೊದಲ ಸ್ಥಾನ (100)ದಲ್ಲಿದೆ. ಅನಂತರ ಕ್ರಮವಾಗಿ ಗುಜರಾತ್ (61) ಹಾಗೂ ಜಾರ್ಖಂಡ್ (46) ಇದೆ ಎಂದು ವರದಿ ಹೇಳಿದೆ. ಈ ನಡುವೆ ಗುಜರಾತ್‌ ನಲ್ಲಿರುವ ವಿಚಾರಣಾ ನ್ಯಾಯಾಲಯಗಳು 2002ರಲ್ಲಿ ಅತ್ಯಧಿಕ ಸಂಖ್ಯೆಯ ಮರಣ ದಂಡನೆ (51) ವಿಧಿಸಿದೆ. ಕಳೆದ ಎರಡು ದಶಕಗಳಲ್ಲಿ ವಿಚಾರಣಾ ನ್ಯಾಯಾಲಯಗಳು ಅತ್ಯಧಿಕ ಸಂಖ್ಯೆಯಲ್ಲಿ ಮರಣ ದಂಡನೆ ವಿಧಿಸಿದರೂ ಅವುಗಳಲ್ಲಿ ಕೆಲವು ತೀರ್ಪುಗಳನ್ನು ಮಾತ್ರ ಉಚ್ಚ ನ್ಯಾಯಾಲಯ ಎತ್ತಿ ಹಿಡಿದಿದೆ. 

ದೇಶಾದ್ಯಂತ 2022ರಲ್ಲಿ 68 ಪ್ರಕರಣಗಳು ಉಚ್ಚ ನ್ಯಾಯಾಲಯಗಳಲ್ಲಿ ತೀರ್ಮಾನವಾಗಿವೆ. ಅವುಗಳಲ್ಲಿ ಕೇವಲ ನಾಲ್ಕು ಪ್ರಕರಣಗಳಲ್ಲಿ ಮಾತ್ರ ಮರಣದಂಡನೆಯನ್ನು ಎತ್ತಿ ಹಿಡಿಯಲಾಗಿದೆ. 19 ಪ್ರಕರಣಗಳಲ್ಲಿ 40 ದೋಷಿಗಳನ್ನು ಬಿಡುಗಡೆ ಮಾಡಲಾಗಿದೆ. 39 ಪ್ರಕರಣಗಳಲ್ಲಿ 51 ಆರೋಪಿಗಳಿಗೆ ಕಡಿಮೆ ಶಿಕ್ಷೆ ವಿಧಿಸಲಾಗಿದೆ. ಅಲ್ಲದೆ, 6 ಪ್ರಕರಣಗಳನ್ನು ವಿಚಾರಣಾ ನ್ಯಾಯಾಲಯಕ್ಕೆ ಶಿಫಾರಸು ಮಾಡಲಾಗಿದೆ ಎಂದು ವರದಿ ಹೇಳಿದೆ.

Similar News