​ರಶ್ಯದ ವಾಯುದಾಳಿಯಲ್ಲಿ ಕನಿಷ್ಟ 4 ಮಂದಿ ಮೃತ್ಯು: ವರದಿ

Update: 2023-01-30 17:05 GMT

ಕೀವ್, ಜ.30: ದಕ್ಷಿಣ ಉಕ್ರೇನ್ ನ ಖೆರ್ಸಾನ್ ನಗರದ ಮೇಲೆ ರಶ್ಯ ನಡೆಸಿದ ಶೆಲ್ದಾಳಿಯಲ್ಲಿ ಕನಿಷ್ಟ 3 ಮಂದಿ ಮೃತಪಟ್ಟಿದ್ದು ಹಲವರು ಗಾಯಗೊಂಡಿದ್ದಾರೆ. ಖಾರ್ಕಿವ್ ನಗರದ ಮೇಲೆ ನಡೆದ ದಾಳಿಯಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಪ್ರಾಂತೀಯ ಗವರ್ನರ್ ರನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. 

ಸೋಮವಾರ ದಿನವಿಡೀ ರಶ್ಯದ ಸೇನೆ ದಕ್ಷಿಣದ ಖೆರ್ಸಾನ್ ನಗರದ ಮೇಲೆ ಕ್ರೂರವಾಗಿ ಶೆಲ್ ದಾಳಿ ನಡೆಸಿದ್ದು 3 ಮಂದಿ ಮೃತಪಟ್ಟಿದ್ದು ಇತರ 6 ಮಂದಿ ಗಾಯಗೊಂಡಿದ್ದಾರೆ. ಈ ಪ್ರದೇಶದ ಆಸ್ಪತ್ರೆಗೆ ಹಾನಿಯಾಗಿದ್ದು ಆಸ್ಪತ್ರೆಯಲ್ಲಿದ್ದ ಇಬ್ಬರು ಮಹಿಳೆಯರು ಹಾಗೂ ನರ್ಸ್ಗಳು ಗಾಯಗೊಂಡಿದ್ದಾರೆ ಎಂದು ಟಿವಿ ವಾಹಿನಿಯಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ. 

ಉಕ್ರೇನ್ನ 2ನೇ ಅತೀ ದೊಡ್ಡ ನಗರ ಖಾರ್ಕಿವ್ನಲ್ಲಿ ರಶ್ಯದ ವಾಯುದಾಳಿಯಿಂದ 4 ಅಂತಸ್ತಿನ ಜನವಸತಿ ಕಟ್ಟಡಕ್ಕೆ ಹಾನಿಯಾಗಿದ್ದು ಓರ್ವ ಹಿರಿಯ ಮಹಿಳೆ ಮೃತಪಟ್ಟಿದ್ದಾರೆ. ಮೂವರು ಗಾಯಗೊಂಡಿದ್ದಾರೆ ಎಂದು ಪ್ರಾದೇಶಿಕ ಮಿಲಿಟರಿ ಮುಖ್ಯಸ್ಥ ಒಲೆಹ್ ಸಿನೆಹುಬೋವ್ ಹೇಳಿದ್ದಾರೆ. ದಕ್ಷಿಣ ಉಕ್ರೇನ್ನ ಝಪೋರಿಝಿಯಾ ಪ್ರಾಂತದಲ್ಲಿ ಉಕ್ರೇನ್ ಪಡೆಯ ಕ್ಷಿಪಣಿ ದಾಳಿಯಿಂದ ರೈಲ್ವೇ ಸೇತುವೆ ಧ್ವಂಸಗೊಂಡು 4 ಮಂದಿ ಮೃತಪಟ್ಟಿದ್ದು 5 ಮಂದಿ ಗಾಯಗೊಂಡಿರುವುದಾಗಿ ಈ ಪ್ರದೇಶದಲ್ಲಿ ರಶ್ಯ ನೇಮಿಸಿದ ಅಧಿಕಾರಿ ಯೆವ್ಜಿನಿ ಬಲಿಟ್ಸ್ಕಿ  ಹೇಳಿದ್ದಾರೆ. ಉಕ್ರೇನ್ನ ಝಪೋರಿಝಿಯ ಪ್ರದೇಶ ರಶ್ಯ ಪಡೆಯ ವಶದಲ್ಲಿದೆ.

Similar News