ಭಟ್ಕಳ: ಫೆ.3 ರಿಂದ 9ರವರೆಗೆ ಭಟ್ಕಳದಲ್ಲಿ ರಾಷ್ಟ್ರೀಯ ಮಟ್ಟದ ಬೃಹತ್ ಮಕ್ಕಳ ಪುಸ್ತಕ ಮೇಳ

Update: 2023-01-30 17:09 GMT

ಭಟ್ಕಳ: ‘ಇದಾರ-ಎ-ಅದ್ಬೆ ಅತ್ಫಾಲ್’ ಮಕ್ಕಳ ಸಾಹಿತ್ಯ ಸಂಸ್ಥೆಯಿಂದ ಭಟ್ಕಳದ ತಾಲೂಕು ಕ್ರೀಡಾಂಗಣ (ವೈ.ಎಂ.ಎಸ್.ಎ ಮೈದಾನ)ದಲ್ಲಿ ಫೆ.3 ರಿಂದ 9 ರ ವರೆಗೆ ರಾಷ್ಟ್ರೀಯ ಮಟ್ಟದ ಬೃಹತ್ ಮಕ್ಕಳ ಪುಸ್ತಕ ಮೇಳ ಆಯೋಜಿಸಲಾಗುತ್ತಿದೆ ಎಂದು ‘ಫೂಲ್’ ಮ್ಯಾಗಝಿನ್ (ಮಕ್ಕಳ ಪಾಕ್ಷಿಕ) ಸಂಪಾದಕ ಮೌಲಾನ ಅಬ್ದುಲ್ಲಾ ಘಾಝಿ ದಾಮ್ದಾಬು ನದ್ವಿ ತಿಳಿಸಿದ್ದಾರೆ. 

ಅವರು ಸೋಮವಾರ ನವಾಯತ್ ಕಾಲೋನಿಯಲ್ಲಿ ಇದಾರೆ ಅದಬ್-ಎ-ಅತ್ಫಾಲ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಪುಸ್ತಕ ಮೇಳದ ಕುರಿತು ಮಾಹಿತಿ ನೀಡಿ ಮಾತನಾಡಿದರು. 

ಈ ಪುಸ್ತಕ ಮೇಳದಲ್ಲಿ ದೇಶದ ವಿವಿಧ ರಾಜ್ಯಗಳ 50ಕ್ಕೂ ಹೆಚ್ಚು ಹೆಸರಾಂತ ಪ್ರಕಾಶನ ಸಂಸ್ಥೆಗಳು, ನಿಯತಕಾಲಿಕೆಗಳ ಸಂಪಾದಕರು ಹಾಗೂ ಸಾಹಿತಿಗಳು ಭಾಗವಹಿಸುತ್ತಿದ್ದಾರೆ ಮಕ್ಕಳಲ್ಲಿ ಪುಸ್ತಕ ಪ್ರೀತಿ ಬೆಳೆಯುಂತಾಗಲು ಮತ್ತು ಅವರ ಆಸಕ್ತಿಯನ್ನು ಓದಿನ ಕಡೆಗೆ ಸೆಳೆಯುವಂತಾಗಲು ಈ ಪುಸ್ತಕ ಮೇಳವು ಸಹಕಾರಿಯಾಗಲಿದೆ ಎಂದು ಅವರು ಮಾಹಿತಿ ನೀಡಿದರು. 

ಈ ಮೇಳದಲ್ಲಿ ಪುಸ್ತಕಗಳಲ್ಲದೆ, ವಿಜ್ಞಾನ ಮತ್ತು ಕಲಾ ಕಾರ್ನರ್, ಮಕ್ಕಳಿಗೆ ಕ್ರೀಡಾ ಸಾಮಗ್ರಿಗಳು ಸಹ ಇರುತ್ತವೆ. ಇನ್ನೂರು ರೂಪಾಯಿಗಳ ಪ್ರತಿ ಖರೀದಿಗೆ ಟೋಕನ್ ವ್ಯವಸ್ಥೆ ಮಾಡಲಾಗಿದೆ. ಇದರಲ್ಲಿ ಪ್ರತಿದಿನ ಆಕರ್ಷಕ ಬಹುಮಾನಗಳನ್ನು ನೀಡಲಾಗುತ್ತದೆ.

ಈ ಮಕ್ಕಳ ಪುಸ್ತಕ ಮೇಳವು ಭಟ್ಕಳದಲ್ಲಿ ಪ್ರಥಮ ಬಾರಿಗೆ ನಡೆಯುತ್ತಿದೆ ಮತ್ತು ಮಕ್ಕಳಿಗಾಗಿ ಮಾತ್ರ ಈ ರೀತಿಯ ಸಂಘಟನೆಯನ್ನು ಭಾರತದಾದ್ಯಂತ ಅನನ್ಯವೆಂದು ಪರಿಗಣಿಸಲಾಗುತ್ತಿದೆ.

ಮೇಳದಲ್ಲಿ ಪ್ರತಿಭಾ ಪ್ರದರ್ಶನಗಳು, ನಾಟಕಗಳು ಮತ್ತು ವಿವಿಧ ಶಾಲೆ, ಮದರಸಾಗಳ ನಡುವೆ ಸಾಂಸ್ಕೃತಿಕ, ಸಾಹಿತ್ಯಿಕ, ಚಿತ್ರಕಲೆ ಸ್ಪರ್ಧೆಗಳು ನಡೆಯಲಿವೆ. ಈ ಹಬ್ಬವನ್ನು ನೋಡಲು ಭಾರತದಾದ್ಯಂತದಿಂದ ಅಭಿಮಾನಿಗಳು, ಪುಸ್ತಕ ಪ್ರೇಮಿಗಳು ಆಗಮಿಸುವ ನಿರೀಕ್ಷೆಯಿದೆ. ಅದರಲ್ಲೂ ಭಟ್ಕಳ ಹಾಗೂ ಸುತ್ತಮುತ್ತಲಿನ ಸಾವಿರಾರು ಜನರು ಇದರ ಪ್ರಯೋಜನ ಪಡೆಯಲಿದ್ದಾರೆ.

‘ಇದಾರ-ಎ-ಅದ್ಬೆ ಅತ್ಫಾಲ್’ ಎಂಬ ಸಂಸ್ಥೆಯು ಕಳೆದ ಏಳು ವರ್ಷಗಳಿಂದ ಮಕ್ಕಳ ಶಿಕ್ಷಣ ಮತ್ತು ತರಬೇತಿಗಾಗಿ ಮತ್ತು ಉರ್ದು ಭಾಷೆಯ ಪ್ರಚಾರ ಮತ್ತು ಪ್ರಸರಣಕ್ಕಾಗಿ ಕಾರ್ಯನಿರ್ವಹಿಸುತ್ತಿರುವ ದೇಶದ ಪ್ರಮುಖ ಸಂಸ್ಥೆಗಳಲ್ಲಿ ಒಂದಾಗಿದೆ. 

ಮಕ್ಕಳ ನಿಯತಕಾಲಿಕೆ "ಫೂಲ್" ಮೂಲಕ ಮಕ್ಕಳನ್ನು ಪುಸ್ತಕದೊಂದಿಗೆ ಬೆಸೆಯುವಂತೆ ಮಾಡಿದ ಹೆಮ್ಮೆ ಈ ಸಂಸ್ಥೆಗಿದೆ. ಕಹೆಕಷಾ ಎಂಬ ಯೂಟ್ಯೂಬ್ ಚಾನೆಲ್ ಮತ್ತು ಸ್ಟೂಡಿಯೂ, ಮೌಲಾನ ಅಬ್ದುಲ್ ಬಾರಿ ನದ್ವಿ ಗ್ರಂಥಾಲಯ, ನಶ್ರೀಯಾತ್ ಪ್ರಕಾಶನ ಇದಾರಾ ಅಬದ್-ಎ-ಅತ್ಫಾಲ್ ಸಂಸ್ಥೆಯಿಂದ ನಡೆಸಲ್ಪಡುತ್ತಿದ್ದು ಇದರಿಂದಾಗಿ ಮಕ್ಕಳಲ್ಲಿ ಪುಸ್ತಕದ ಪ್ರೇಮ, ಸಾಹಿತ್ಯದ ಕಡೆಗೆ ಒಲವು ಬೆಳೆಯಲು ಕಾರಣವಾಗಿದೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ‘ಫೂಲ್’ ಮ್ಯಾಗಝಿನ್ ಪ್ರಧಾನ ಸಂಪಾದಕ ಮೌಲಾನ ಸಮಾನ್ ಖಲಿಫಾ ನದ್ವಿ, ಇದಾರಾ ಅದಬ್-ಎ-ಅತ್ಫಾಲ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮೌಲಾನ ಮುಅಝ್ಝಮ್ ಶಾಬಂದ್ರಿ ನದ್ವಿ, ಉಪಾಧ್ಯಕ್ಷ ಮೌಲಾನ ಸವೂದ್ ಶಿಂಗೇಟಿ ನದ್ವಿ ಉಪಸ್ಥಿತರಿದ್ದರು.

Similar News