ಆಸ್ಟ್ರೇಲಿಯಾ: ಖಲಿಸ್ತಾನ ಪರ ಗುಂಪಿನ ದಾಳಿ: 5 ಮಂದಿಗೆ ಗಾಯ

Update: 2023-01-30 18:07 GMT

ಮೆಲ್ಬೋರ್ನ್, ಜ.30: ಆಸ್ಟ್ರೇಲಿಯಾದ ಮೆಲ್ಬೋರ್ನ್ ನಲ್ಲಿ ರಾಷ್ಟ್ರಧ್ವಜ ಹಿಡಿದು ಪ್ರತಿಭಟನಾ ರ್ಯಾಲಿಯಲ್ಲಿ ಪಾಲ್ಗೊಂಡಿದ್ದವರ ಮೇಲೆ ಖಲಿಸ್ತಾನ ಪರ ಗುಂಪೊಂದು ದಾಳಿ ನಡೆಸಿದ್ದು 5 ಮಂದಿ ಗಾಯಗೊಂಡಿದ್ದಾರೆ ಎಂದು `ದಿ ಆಸ್ಟ್ರೇಲಿಯಾ ಟುಡೆ' ವರದಿ ಮಾಡಿದೆ.

ಮೆಲ್ಬೋರ್ನ್ ನಲ್ಲಿ ಹಿಂದೂ ದೇವಸ್ಥಾನ ಧ್ವಂಸಗೊಳಿಸಿದ ಘಟನೆಯನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಈ ದಾಳಿ ನಡೆದಿದೆ. ಖಡ್ಗ, ದೊಣ್ಣೆಯಿಂದ ದಾಳಿ ನಡೆದಾಗ ಜಾಥಾದಲ್ಲಿ ಪಾಲ್ಗೊಂಡವರು ದಿಕ್ಕಾಪಾಲಾಗಿ ಓಡುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಆಸ್ಟ್ರೇಲಿಯಾದಲ್ಲಿ ಖಲಿಸ್ತಾನ ಪರ ಗುಂಪು ಭಾರತ  ವಿರೋಧಿ ಚಟುವಟಿಕೆಯಲ್ಲಿ ಪಾಲ್ಗೊಂಡಿರುವುದು ಆತಂಕಕಾರಿ ಬೆಳವಣಿಗೆ ಎಂದು ಬಿಜೆಪಿ ಮುಖಂಡ ಮಂಜಿಂದರ್ ಸಿಂಗ್ ಸಿರ್ಸಾ ಟ್ವೀಟ್ ಮಾಡಿದ್ದಾರೆ.

ದುಷ್ಕರ್ಮಿಗಳ ವಿರುದ್ಧ  ಕಠಿಣ ಕ್ರಮ ಕೈಗೊಳ್ಳುವಂತೆ `ಹಿಂದು ಹ್ಯೂಮನ್ ರೈಟ್ಸ್ ಆಸ್ಟ್ರೇಲಿಯಾ'ದ ನಿರ್ದೇಶಕ ಸರಾಹ್ ಎಲ್ ಗೇಟ್ಸ್ ಆಸ್ಟ್ರೇಲಿಯಾ ಸರಕಾರವನ್ನು ಆಗ್ರಹಿಸಿದ್ದಾರೆ. ತ್ರಿವರ್ಣ ಧ್ವಜ ಹಿಡಿದಿದ್ದ ಭಾರತೀಯರನ್ನು ಖಡ್ಗ ಜಳಪಿಸುತ್ತಾ ಬೆದರಿಸಿದ್ದ ಖಲಿಸ್ತಾನಿ ಗೂಂಡಾನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಆಸ್ಟ್ರೇಲಿಯನ್ ಹಿಂದು ಮೀಡಿಯಾ ಟ್ವೀಟ್ ಮಾಡಿದೆ. ಘಟನೆಯನ್ನು ಖಂಡಿಸಿರುವ ವಿಕ್ಟೋರಿಯಾ ಪೊಲೀಸ್ ಇಲಾಖೆ, ದಾಳಿಗೆ ಸಂಬಂಧಿಸಿ ಇಬ್ಬರು ಯುವಕರನ್ನು ಬಂಧಿಸಿರುವುದಾಗಿ ಹೇಳಿದೆ.

Similar News