5 ವರ್ಷಗಳ ಬಳಿಕ ಜನವರಿಯಲ್ಲಿ ಮಳೆ ಕೊರತೆ; ಚಳಿಗಾದ ಬೆಳೆಗಳಿಗೆ ಹಾನಿ

Update: 2023-01-31 02:17 GMT

ಪುಣೆ: ದೇಶದಲ್ಲಿ ಜನವರಿ ತಿಂಗಳಲ್ಲಿ ಐದು ವರ್ಷಗಳಲ್ಲೇ ಕನಿಷ್ಠ ಮಳೆ ಬಿದ್ದಿದೆ. ಜನವರಿಯ ಮೊದಲ 30 ದಿನಗಳಲ್ಲಿ ದೇಶಾದ್ಯಂತ ಕೇವಲ 12.4 ಮಿಲಿಮೀಟರ್ ಮಳೆಯಾಗಿದ್ದು, ಇದು ವಾಡಿಕೆಯ ಮಳೆಗಿಂತ ಶೇಕಡ 25ರಷ್ಟು ಕಡಿಮೆ. ಈ ಕೊರತೆ ಜನವರಿ 31ರಂದು ಸರಿದೂಗುವ ಸಾಧ್ಯತೆ ಇಲ್ಲ ಎಂದು ಭಾರತದ ಹವಾಮಾನ ಇಲಾಖೆ (ಐಎಂಡಿ) ಹೇಳಿಕೆ ನೀಡಿದೆ.

ಪಂಜಾಬ್, ಉತ್ತರಾಖಂಡ, ಉತ್ತರ ಪ್ರದೇಶ, ಬಿಹಾರ, ಛತ್ತೀಸ್‌ಗಢ ಮತ್ತು ಮಧ್ಯಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಮಳೆ ಕೊರತೆ ಇದೆ ಎಂದು ಐಎಂಡಿ ಅಂಕಿ ಅಂಶಗಳಿಂದ ತಿಳಿದು ಬರುತ್ತದೆ.

"ಪಶ್ಚಿಮಮುಖ ಪ್ರಕ್ಷುಬ್ಧತೆ ಚಟುವಟಿಕೆಯಿಂದಾಗಿ ಪಶ್ಚಿಮ ಹಾಗೂ ವಾಯವ್ಯ ಭಾರತದಲ್ಲಿ ಸಾಮಾನ್ಯ ಅಥವಾ ಅಧಿಕ ಮಳೆ ಬಿದ್ದಿದೆ. ಆದಾಗ್ಯೂ ಚಳಿಗಾಲದ ಮಳೆ ಒಟ್ಟಾರೆಯಾಗಿ ದೇಶದಲ್ಲಿ ವಾಡಿಕೆಗಿಂತ ಕಡಿಮೆ ಇದೆ. ದುರ್ಬಲ ಪಶ್ಚಿಮಮುಖಿ ಪ್ರಕ್ಷುಬ್ಧತೆ ಚಟುವಟಿಕೆಯ ಪರಿಣಾಮ ಕಲೆದ ವರ್ಷದ ಡಿಸೆಂಬರ್‌ನಲ್ಲೂ ಮಳೆ ವಾಡಿಕೆಗಿಂತ ಕಡಿಮೆ" ಎಂದು ಐಎಂಡಿ ಮಹಾನಿರ್ದೇಶಕ ಮೃತ್ಯುಂಜಯ ಮೊಹಾಪಾತ್ರ ಹೇಳಿದ್ದಾರೆ.

ಕೊನೆಯ ಪಶ್ಚಿಮಮುಖಿ ಪ್ರಕ್ಷುಬ್ಧತೆಯ ಪರಿಣಾಮ ಪಶ್ಚಿಮ ಹಿಮಾಲಯ ಪ್ರದೇಶ ಮತ್ತು ಪಂಜಾಬ್ ಹಾಗೂ ಹರ್ಯಾಣದ ಉತ್ತರ ಭಾಗದಲ್ಲಿ ವ್ಯಾಪಕ ಮಳೆಯಾಗಿದೆ. ಈಗ ಬರುತ್ತಿರುವ ಮಳೆ ಮಂಗಳವಾರದ ವರೆಗೆ ಮುಂದವರಿಯುವ ಸಾಧ್ಯತೆ ಇದ್ದು, ಬಳಿಕ ಕಡಿಮೆಯಾಗಲಿದ್ದು, ಈ ತಿಂಗಳ ಕೊರತೆ ನೀಗುವ ಸಾಧ್ಯತೆ ಇಲ್ಲ ಎಂದು ಸ್ಪಷ್ಟಪಡಿಸಿದಾರೆ.

2022ರ ಡಿಸೆಂಬರ್‌ನಲ್ಲಿ ಕೂಡಾ ಕೇವಲ 13.6 ಮಿಲಿಮೀಟರ್ ಮಳೆಯಾಗಿದ್ದು, 2016ರ ಡಿಸೆಂಬರ್ ಬಳಿಕ ಇದು ಅತ್ಯಂತ ಕನಿಷ್ಠ ಪ್ರಮಾಣವಾಗಿದೆ.

ಭಾರತದ ಗೋಧಿ ಬೆಳೆಯುವ ಶೇಕಡ 95ಕ್ಕಿಂತ ಹೆಚ್ಚು ಪ್ರದೇಶ ನೀರಾವರಿ ಜಮೀನು. ಆದಾಗ್ಯೂ ಮಂದ ಮಳೆ, ತಂಪಾಗುವಿಕೆಯ ಅವಧಿ ಹೆಚ್ಚಲು ಕಾರಣವಾಗಲಿದ್ದು, ಇದು ಚಳಿಗಾಲದ ಗೋಧಿ ಇಳುವರಿಗೆ ಅನುಕೂಲ. ಸಕಾಲಿಕ ಮತ್ತು ಚಳಿಗಾಲದ ಲಘು ಮಳೆ ಗೋಧಿ ಉತ್ಪಾದನೆಗೆ ಅನುಕೂಲ. ಚಳಿಗಾಲ ಒಣಹವೆಯಿಂದ ಕೂಡಿದ್ದರೆ, ಹಿಮ ಬೆಳೆಗಳ ಮೆಲೆ ಹೆಚ್ಚಾಗಿ ಬೀಳುತ್ತದೆ. ಇದು ಬೆಳೆ ಹಾನಿಗೆ ಕಾರಣವಾಗಿ ಉತ್ಪಾದನೆ ಕುಂಠಿತಗೊಳ್ಳುವ ಸಾಧ್ಯತೆ ಇದೆ ಎಂದು ಐಸಿಎಆರ್-ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ ವಿಜ್ಞಾನಿ ರಾಜಬೀರ್ ಯಾವದ್ ಹೇಳಿದ್ದಾರೆ.

Similar News