ಮೂರೇ ದಿನದಲ್ಲಿ ಶೇಕಡ 29ರಷ್ಟು ಮಾರುಕಟ್ಟೆ ಮೌಲ್ಯ ಕಳೆದುಕೊಂಡ ಅದಾನಿ ಸಮೂಹ

Update: 2023-01-31 06:17 GMT

ಮುಂಬೈ: ಅದಾನಿ ಸಮೂಹ ಕಂಪನಿಗಳ ಶೇರುಗಳ ಮಾರಾಟಕ್ಕೆ ಜನ ಮುಗಿಬಿದ್ದ ಹಿನ್ನೆಲೆಯಲ್ಲಿ ಸತತ ಮೂರನೇ ದಿನ ಅಂದರೆ ಸೋಮವಾರ ಕೂಡಾ ಅದಾನಿ ಷೇರುಗಳ ಮೌಲ್ಯ ಕುಸಿತ ಮುಂದುವರಿದಿದೆ. ಕೇವಲ ಮೂರು ದಿನದಲ್ಲಿ ಹೂಡಿಕೆದಾರರ 1.4 ಲಕ್ಷ ಕೋಟಿ ರೂಪಾಯಿ ಸಂಪತ್ತು ನಷ್ಟವಾಗಿದೆ. ಅದಾನಿ ಸಮೂಹದ ಮಾರುಕಟ್ಟೆ ಬಂಡಾವಳ ಶೇಕಡ 29ರಷ್ಟು ಅಂದರೆ 5.6 ಲಕ್ಷ ಕೋಟಿ ರೂಪಾಯಿ ಸವೆದಿದೆ.

ಅಮೆರಿಕ ಮೂಲದ ಅಲ್ಪಾವಧಿ ಮಾರಾಟ ಸಂಸ್ಥೆಯಾದ ಹಿಂಡೆನ್‌ಬರ್ಗ್ ರೀಸರ್ಚ್, ಅದಾನಿ ಸಮೂಹವನ್ನು ಟೀಕಿಸಿದ ವರದಿಯನ್ನು ಬಿಡುಗಡೆ ಮಾಡಿದ ಬಳಿಕ ಕಳೆದ ಬುಧವಾರದಿಂದ ಕಂಪನಿಯ ಷೇರುಗಳು ಕುಸಿತದ ಹಾದಿಯಲ್ಲಿವೆ. ಅಂತೆಯೇ ಅದಾನಿ ವಿಶ್ವದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಎಂಟನೇ ಸ್ಥಾನಕ್ಕೆ ಕುಸಿದಿದ್ದಾರೆ. ಒಂದು ವಾರದ ಹಿಂದೆ ಮೂರನೇ ಸ್ಥಾನದಲ್ಲಿದ್ದ ಅದಾನಿ ಶುಕ್ರವಾರ ಏಳನೇ ಸ್ಥಾನಕ್ಕೆ ಕುಸಿದಿದ್ದರು. 88.2 ಶತಕೋಟಿ ಡಾಲರ್ (7.2 ಲಕ್ಷ ಕೋಟಿ ರೂಪಾಯಿ) ನಿವ್ವಳ ಸಂಪತ್ತಿನೊಂದಿಗೆ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಎನಿಸಿದ್ದ ಅದಾನಿ ಇದೀಗ, ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರಿಗಿಂತ ಕೇವಲ 4.1 ಶತಕೋಟಿ ಡಾಲರ್ (33 ಸಾವಿರ ಕೋಟಿ ರೂಪಾಯಿ)ನಷ್ಟು ಮುಂದಿದ್ದಾರೆ. ಫೋರ್ಬ್ಸ್ ರಿಯಲ್ ಟೈಮ್ ಬಿಲಿಯನೇರ್ ಇಂಡೆಕ್ಸ್ ಪ್ರಕಾರ ಅಂಬಾನಿ 10ನೇ ಸ್ಥಾನದಲ್ಲಿದ್ದಾರೆ.

ಹಿಂಡೆನ್‌ಬರ್ಗ್ ರೀಸರ್ಚ್ ಮುಂದಿಟ್ಟಿದ್ದ 88 ಪ್ರಶ್ನೆಗಳಿಗೆ ಅದಾನಿ ಸಮೂಹ ಭಾನುವಾರ ರಾತ್ರಿ 413 ಪುಟಗಳ ಸ್ಪಷ್ಟನೆಯ ದಾಖಲೆ ಬಿಡುಗಡೆ ಮಾಡಿದ್ದರೂ, ಸಮೂಹ ಕಂಪನಿಗಳ ಷೇರುಗಳ ಮಾರಾಟ ನಿರಂತರವಾಗಿ ಮುಂದುವರಿದಿದೆ.

ಅದಾನಿ ಎಂಟರ್‌ಪ್ರೈಸಸ್‌ನ 20 ಸಾವಿರ ಕೋಟಿ ರೂಪಾಯಿಗಳ ಫಾಲೋ ಆನ್ ಪಬ್ಲಿಕ್ ಆಫರಿಂಗ್ (ಎಫ್‌ಪಿಓ) ಎರಡನೇ ದಿನ ಕೇವಲ ಶೇಕಡ 3ರಷ್ಟು ಮಾತ್ರ ಮಾರಾಟವಾಗಿದೆ. ದುಬೈ ಮೂಲದ ಇಂಟರ್‌ನ್ಯಾಷನಲ್ ಹೋಲ್ಡಿಂಗ್ ಕಂಪನಿ ಈ ಎಫ್‌ಪಿಓದಲ್ಲಿ 400 ದಶಲಕ್ಷ ಡಾಲರ್ ಹೂಡಿಕೆ ಮಾಡುವ ಭರವಸೆ ನೀಡಿದ ಹೊರತಾಗಿಯೂ ಸಾರ್ವಜನಿಕರಿಂದ ನೀರಸ ಪ್ರತಿಕ್ರಿಯೆ ಕಂಡುಬಂದಿದೆ.

ಸೋಮವಾರ ವಹಿವಾಟು ಮುಕ್ತಾಯದ ವೇಳೆಗೆ ಎಇಎಲ್ 14 ಲಕ್ಷ ಷೇರುಗಳಿಗೆ ಬಿಡ್‌ಗಳನ್ನು ಸ್ವೀಕರಿಸಿದೆ. ಒಟ್ಟು 4.6 ಕೋಟಿ ಷೇರುಗಳು ಮಾರಾಟಕ್ಕಿದ್ದು, ಕೇವಲ ಶೇಕಡ 3ರಷ್ಟಕ್ಕೆ ಬಿಡ್ ದೊರಕಿದೆ ಎನ್ನುವುದು ಬಿಎಸ್‌ಇ ವೆಬ್‌ಸೈಟ್‌ನಿಂದ ತಿಳಿದು ಬರುತ್ತದೆ.

Similar News