ಪ್ರಯಾಗರಾಜ್ ಹಿಂಸಾಚಾರ: ಹೋರಾಟಗಾರ ಜಾವೇದ್ ಮುಹಮ್ಮದ್ ಗೆ ಜಾಮೀನು ಮಂಜೂರುಗೊಳಿಸಿದ ನ್ಯಾಯಾಲಯ

Update: 2023-01-31 17:28 GMT

ಲಕ್ನೋ, ಜ. 31: ಪ್ರಯಾಗ್ರಾಜ್ ಹಿಂಸಾಚಾರ ಪ್ರಕರಣದಲ್ಲಿ ಪ್ರಮುಖ ಆರೋಪಿ ಎಂಬುದಾಗಿ ಪೊಲೀಸರು ಹೆಸರಿಸಿದ್ದ ‘ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ’ದ ಕಾರ್ಯಕರ್ತ ಜಾವೇದ್ ಮುಹಮ್ಮದ್ ಗೆ ಅಲಹಾಬಾದ್ ಹೈಕೋರ್ಟ್ ಜಾಮೀನು ನೀಡಿದೆ.

ಮುಹಮ್ಮದ್ ಗುಂಪಿಗೆ ಪ್ರಚೋದನೆ ಕೊಡುತ್ತಿದ್ದರು ಎನ್ನುವುದನ್ನಾಗಲಿ, ಶಸ್ತ್ರಾಸ್ತ್ರಗಳನ್ನು ಹೊಂದಿದ್ದರು ಎನ್ನುವುದನ್ನಾಗಲಿ ಅಥವಾ ವಾಹನಗಳಿಗೆ ಬೆಂಕಿ ಕೊಡುತ್ತಿದ್ದರು ಎನ್ನುವುದನ್ನಾಗಲಿ, ಮೊದಲ ಮಾಹಿತಿ ವರದಿಯೂ ತೋರಿಸುವುದಿಲ್ಲ, ಪ್ರಾಸಿಕ್ಯೂಶನ್ನ ಹೇಳಿಕೆಗಳೂ ತೋರಿಸುವುದಿಲ್ಲ ಎಂದು ಅಲಹಾಬಾದ್ ನ್ಯಾಯಾಲಯದ ನ್ಯಾಯಾಧೀಶ ಸಮೀರ್ ಜೈನ್ ಹೇಳಿದರು.

‘‘ಈ ಹಂತದಲ್ಲಿ, ಹಿಂಸಾಚಾರದಲ್ಲಿ ಆರೋಪಿಯು ಪ್ರಮುಖ ಪಾತ್ರ ವಹಿಸಿದ್ದನು ಎಂದು ಹೇಳಲು ಸಾಧ್ಯವಿಲ್ಲ’’ ಎಂದು ನ್ಯಾಯಾಲಯ ಹೇಳಿದೆ.

ಪ್ರವಾದಿ ಮುಹಮ್ಮದರ ವಿರುದ್ಧ ನಿಂದನಾತ್ಮಕ ಹೇಳಿಕೆಗಳನ್ನು ನೀಡಿರುವ ಬಿಜೆಪಿಯ ಇಬ್ಬರು ವಕ್ತಾರರ ವಿರುದ್ಧ ಪ್ರಯಾಗ್ರಾಜ್ನಲ್ಲಿ ಹಿಂಸಾತ್ಮಕ ಪ್ರತಿಭಟನೆಗಳನ್ನು ನಡೆಸಲು ಪಿತೂರಿ ನಡೆಸುತ್ತಿದ್ದರು ಎಂಬ ಆರೋಪದಲ್ಲಿ ಸಾಮಾಜಿಕ ಕಾರ್ಯಕರ್ತನನ್ನು ಕಳೆದ ವರ್ಷದ ಜೂನ್ ತಿಂಗಳಲ್ಲಿ ಬಂಧಿಸಲಾಗಿತ್ತು.

ಜೂನ್ 12ರಂದು, ಪುರಸಭೆ ಅಧಿಕಾರಿಗಳು ಮುಹಮ್ಮದ್ರ ಮನೆ ಅಕ್ರಮ ಕಟ್ಟಡವೆಂದು ಹೇಳಿಕೊಂಡು ಅದನ್ನು ಕೆಡವಿದ್ದರು. ಆದರೆ, ಮನೆಯು ಅಕ್ರಮವೆನ್ನುವುದನ್ನು ಹೇಳುವ ಯಾವುದೇ ನೋಟಿಸನ್ನು ನಮಗೆ ನೀಡಲಾಗಿಲ್ಲ ಎಂದು ಮನೆ ಕೆಡವಿದ ಸಂದರ್ಭದಲ್ಲಿ ಜಾವೇದ್ರ ಮಗಳು ಸುಮಯ್ಯ ಫಾತಿಮಾ ಹೇಳಿದ್ದರು.

ಜಾಮೀನು ನೀಡುವುದೇ ನಿಯಮ ಹಾಗೂ ಜೈಲು ಅಪವಾದ ಎಂದು ತನ್ನ ಜಾಮೀನು ಆದೇಶದಲ್ಲಿ ಹೈಕೋರ್ಟ್ ತಿಳಿಸಿದೆ. ಶಿಕ್ಷಿಸುವ ಉದ್ದೇಶವನ್ನು ಇಟ್ಟುಕೊಂಡು ಜಾಮೀನು ನಿರಾಕರಿಸಲು ಸಾಧ್ಯವಿಲ್ಲ ಎಂಬುದಾಗಿಯೂ ಅದು ಅಭಿಪ್ರಾಯಪಟ್ಟಿದೆ.

Similar News