ಎಎಸ್‌ಐ ಗೋಪಾಲ್ ದಾಸ್‌ಗೆ ಸಚಿವರನ್ನು ಕೊಲ್ಲುವ ಸ್ಪಷ್ಟ ಉದ್ದೇಶ ಇತ್ತು: ಎಫ್‌ಐಆರ್

Update: 2023-01-31 14:46 GMT

ಭುವನೇಶ್ವರ, ಜ. 31: ಆರೋಪಿ ಸಹಾಯಕ ಸಬ್ ಇನ್ಸ್ಪೆಕ್ಟರ್ (ಎಎಸ್ಐ) ಗೋಪಾಲ್ ದಾಸ್ಗೆ ಆರೋಗ್ಯ ಸಚಿವ ನಬಾ ಕಿಶೋರ್ ದಾಸ್ ಅವರನ್ನು ಹತ್ಯೆಗೈಯುವ ಸ್ಪಷ್ಟ ಉದ್ದೇಶ ಇತ್ತು ಎಂದು ಸಚಿವರ ಹತ್ಯೆಗೆ ಸಂಬಂಧಿಸಿ ದಾಖಲಿಸಲಾದ ಎಫ್ಐಆರ್ನಲ್ಲಿ ಒಡಿಶಾ ಪೊಲೀಸರು ಹೇಳಿದ್ದಾರೆ. ಸಚಿವರ ಮೇಲೆ ಗುಂಡು ಹಾರಿಸಿದ ಸ್ಥಳದಲ್ಲಿ ಇದ್ದ ಬ್ರಜ್ನಗರ್ ಪೊಲೀಸ್ ಠಾಣೆಯ ಪ್ರಭಾರಿ ಇನ್ಸ್ಪೆಕ್ಟರ್ (ಐಐಸಿ) ಪ್ರದ್ಯುಮ್ನ ಕುಮಾರ್ ಸ್ವೈನ್ ಅವರು ಈ ಹೇಳಿಕೆ ನೀಡಿದ್ದಾರೆ. ‌

ಅಪರಾಹ್ನ ಸುಮಾರು 12.15ಕ್ಕೆ ಸಚಿವ ನಬಾ ಕಿಶೋರ್ ದಾಸ್ ಅವರ ಕಾರು ಕಟ್ಟಡದ ಸಮೀಪ ನಿಂತಿತು. ಅವರು ಕಾರಿನಿಂದ ಕೆಳಗಿಳಿದರು. ಎಲ್ಲವೂ ಇದ್ದಕ್ಕಿದ್ದಂತೆ ನಡೆಯಿತು. ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸಂಚಾರ ತೆರವುಗೊಳಿಸುವ ಕರ್ತವ್ಯಕ್ಕೆ ನಿಯೋಜಿಸಲಾಗಿದ್ದ ಗಾಂಧಿ ಚೌಕ ಪೊಲೀಸ್ ಹೊರ ಠಾಣೆಯ ಎಎಸ್ಐ ಗೋಪಾಲ್ ದಾಸ್ ಸಚಿವರ ಸಮೀಪಕ್ಕೆ ಆಗಮಿಸಿದ ಹಾಗೂ ತನ್ನ ಸೇವಾ ರಿವಾಲ್ವರ್ನಿಂದ ಅವರ ಮೇಲೆ ಗುಂಡು ಹಾರಿಸಿದ ಎಂದು ಸ್ವೈನ್ ತಿಳಿಸಿದ್ದಾರೆ. 

ಗುಂಡು ಎದೆಗೆ ತಾಗುತ್ತಿದ್ದಂತೆ ಸಚಿವರು ಕುಸಿದು ಬಿದ್ದರು. ಅವರ ದೇಹದಿಂದ ರಕ್ತ ಸೋರಲು ಆರಂಭವಾಯಿತು. ಆತ ಹಾರಿಸಿದ ಇನ್ನೊಂದು ಗುಂಡು ತನ್ನ ಉಂಗುರದ ಬೆರಳಿಗೆ ತಗುಲಿತು. ಅನಂತರ ತಾನು ಕಾನ್ಸ್ಟೆಬಲ್ ಕೆ.ಸಿ. ಪ್ರಧಾನ್ನ ಸಹಾಯದಿಂದ ದಾಸ್ನನ್ನು ಸೆರೆ ಹಿಡಿದೆ ಎಂದು ಅವರು ತಿಳಿಸಿದ್ದಾರೆ. ಗೋಪಾಲ್ ದಾಸ್ನ ದಾಳಿಗೆ ಅವರು ಎಫ್ಐಆರ್ನಲ್ಲಿ ಯಾವುದೇ ವಿವರಣೆ ನೀಡಿಲ್ಲ. 

ಬೆಹ್ರಾಮ್ಪುರದ ಎಂಕೆಸಿಜಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯ ಮನೋವೈದ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಮನೋವೈದ್ಯ ಡಾ. ಚಂದ್ರಶೇಖರ್ ತ್ರಿಪಾಠಿ ಅವರು, ದಾಸ್ ಕಳೆದ 10 ವರ್ಷಗಳಿಂದ ಬೈಪೋಲಾರ್ ಡಿಸಾರ್ಡರ್ನಿಂದ ಬಳಲುತ್ತಿದ್ದಾನೆ. ಇದು ತೀವ್ರತರ ಮಾನಸಿಕ ಕಾಯಿಲೆಯಾಗಿದ್ದು, ಉನ್ಮಾದ ಸ್ಥಿತಿಯ ಕಾರಣ ಕೆಲವೊಮ್ಮೆ ವ್ಯಕ್ತಿಯ ಮನಸ್ಥಿತಿಯಲ್ಲಿ ಏರುಪೇರಾಗುವ ಸಾಧ್ಯತೆ ಇರುತ್ತದೆ ಎಂದಿದ್ದಾರೆ. 

ದಾಸ್ ಮೊದಲು ಎಂಟು ಹತ್ತು ವರ್ಷಗಳ ಹಿಂದೆ ತನ್ನ ಕ್ಲಿನಿಕ್ಗೆ ಭೇಟಿ ನೀಡಿದ್ದ. ಆತ ತುಂಬಾ ಬೇಗ ಕೋಪಗೊಳ್ಳುತ್ತಿದ್ದ. ಇದಕ್ಕಾಗಿ ಆತ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ. ಆತ ನಿಯಮಿತವಾಗಿ ಔಷಧ ತೆಗೆದುಕೊಳ್ಳುತ್ತಾನೆಯೇ ಎಂಬ ಬಗ್ಗೆ ನನಗೆ ತಿಳಿದಿಲ್ಲ. ಔಷದವನ್ನು ನಿಯಮಿತವಾಗಿ ತೆಗೆದುಕೊಳ್ಳದೇ ಇದ್ದರೆ ರೋಗ ಮರುಕಳಿಸುವ ಸಾಧ್ಯತೆ ಇದೆ ಎಂದು ತ್ರಿಪಾಠಿ ಹೇಳಿದ್ದಾರೆ. 

Similar News