ಸ್ವತಂತ್ರ ಕೇಂದ್ರಾಡಳಿತ ಪ್ರದೇಶಕ್ಕಿಂತ ಜಮ್ಮು-ಕಾಶ್ಮೀರದ ಭಾಗವಾಗಿದ್ದಾಗಲೇ ಚೆನ್ನಾಗಿತ್ತು: ಸೋನಂ ವಾಂಗ್‌ಚುಕ್

Update: 2023-01-31 09:27 GMT

ಲಡಾಖ್: ಲಡಾಖ್‌ನ ಮಂಜುಗಡ್ಡೆಗಳು, ಪರ್ವತಗಳು, ನೆಲ ಹಾಗೂ ಜನರನ್ನು ರಕ್ಷಿಸಲು ಲಡಾಖ್ ಅನ್ನು ಸಂವಿಧಾನದ ಆರನೇ ಪರಿಚ್ಛೇದದಡಿ ಸೇರ್ಪಡೆ ಮಾಡಬೇಕು ಎಂದು ಆಗ್ರಹಿಸಿ ಮ್ಯಾಗ್ಸಸ್ಸೆ ಪ್ರಶಸ್ತಿ ವಿಜೇತ ಸೋನಂ ವಾಂಗ್‌ಚುಕ್ ನಡೆಸುತ್ತಿದ್ದ ಐದು ದಿನಗಳ ಹವಾಮಾನ ಉಪವಾಸ ಸತ್ಯಾಗ್ರಹ ಸೋಮವಾರ ಅಂತ್ಯಗೊಂಡಿದ್ದು, ಅವರು ಕೊಂಚ ವಿಚಲಿತರಾಗಿದ್ದಂತೆ ಕಂಡು ಬಂದರು.

ಒಂದು ಕಾಲದ ಪ್ರಧಾನಿ ನರೇಂದ್ರ ಮೋದಿ ಅವರ ಕಟ್ಟಾ ಬೆಂಬಲಿಗ, 2019ರ ಜಮ್ಮು-ಕಾಶ್ಮೀರ ವಿಶೇಷ ಸ್ಥಾನಮಾನ ರದ್ದತಿಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದ, ಹವಾಮಾನ ಹೋರಾಟಗಾರರಾಗಿ ಬದಲಾಗಿರುವ ಎಂಜಿನಿಯರ್ ಮತ್ತು ಸಂಶೋಧಕ ಸೋನಂ ವಾಂಗ್‌ಚುಕ್, "ಶಾಂತಿಯುತ ನಾಡಿನಲ್ಲಿ ಲಡಾಖ್ ಆಡಳಿತವು ಉಗ್ರವಾದವನ್ನು ಬಿತ್ತುವ ಪ್ರಯತ್ನ ಮಾಡುತ್ತಿದೆ" ಎಂದು ಆರೋಪಿಸಿದ್ದಾರೆ ಎಂದು indianexpress.com ವರದಿ ಮಾಡಿದೆ.

ತಮ್ಮ ಪರ್ಯಾಯ ಲಡಾಖ್‌ನ ಹಿಮಾಲಯ ಸಂಸ್ಥೆಯಲ್ಲಿ ಹವಾಮಾನ ಉಪವಾಸ ಸತ್ಯಾಗ್ರಹವನ್ನು ಪೂರ್ಣಗೊಳಿಸಿದ ವಾಂಗ್‌ಚುಕ್, ಲಡಾಖ್‌ನ ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿದರೆ, 2019ರ ಮುನ್ನಿನ ಜಮ್ಮು-ಕಾಶ್ಮೀರ ರಾಜ್ಯದ ಭಾಗವಾಗಿದ್ದಾಗಲೇ ಲಡಾಖ್ ಜನತೆ ಉತ್ತಮವಾಗಿದ್ದರು ಎನಿಸುತ್ತಿದೆ ಎಂದು ಖೇದ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಅವರು, "ನನಗೆ ಮುಚ್ಚಳಿಕೆಯೊಂದಕ್ಕೆ ಸಹಿ ಮಾಡಲು ಸೂಚಿಸಲಾಯಿತು. ನಾನು ಮುಚ್ಚಳಿಕೆಗೆ ಸಹಿ ಮಾಡುವಂತೆ ಮಾಡಲು ನನ್ನ ಶಾಲೆಯ ಮೂವರು ಶಿಕ್ಷಕರನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಲಾಯಿತು. ಈ ಎಲ್ಲ ತಂತ್ರಗಳನ್ನು ಬಳಸಿದ್ದು ಲೆಫ್ಟಿನೆಂಟ್ ಗಮರ್ನರ್ ಸಾಹೇಬರ ಸೂಚನೆ ಮೇರೆಗೆ. ಲೆಫ್ಟಿನೆಂಟ್ ಸಾಹೇಬರೇ, ನೀವು ಶಾಂತಿಯುತ ಲಡಾಖ್‌ನಲ್ಲಿ ಉಗ್ರವಾದದ ಬೀಜ ಬಿತ್ತಲು ಯತ್ನಿಸುತ್ತಿದ್ದೀರಿ ಎಂದು ಹೇಳಲು ಬಯಸುತ್ತೇನೆ. ಯಾವ ಬಗೆಯಲ್ಲಿ ಯುವಕರನ್ನು ನಿರುದ್ಯೋಗಿಗಳನ್ನಾಗಿಸಿ, ಅವರನ್ನು ಶೋಷಿಸಲಾಗುತ್ತಿದೆಯೊ, ಅದರಿಂದಲೇ ಇದು ಸಾಧ್ಯವಾಗಲಿದೆ. ಆದರೆ, ನೆನಪಿಡಿ, ನಾವು ಇದಾಗಲು ಬಿಡುವುದಿಲ್ಲ" ಎಂದು ತಮ್ಮ ವಿಡಿಯೊ ಹೇಳಿಕೆಯಲ್ಲಿ ಕಿಡಿ ಕಾರಿದ್ದಾರೆ.

ಮುಂದುವರಿದು, "ನಾನು ಈ ಮಾತನ್ನು ಹೇಳುತ್ತೇನೆ ಎಂದು ಎಂದಿಗೂ ಎಣಿಸಿರಲಿಲ್ಲ. ಆದರೆ, ನಾವು ಈಗಿನ ಕೇಂದ್ರಾಡಳಿತ ಪ್ರದೇಶಕ್ಕಿಂತ ಜಮ್ಮು-ಕಾಶ್ಮೀರ ರಾಜ್ಯದ ಭಾಗವಾಗಿದ್ದಾಗಲೇ ಹೆಚ್ಚು ಉತ್ತಮವಾಗಿದ್ದೆವು. ನಮ್ಮ ಭವಿಷ್ಯದ ಕೇಂದ್ರಾಡಳಿತ ಪ್ರದೇಶವು ಇನ್ನೂ ಉತ್ತಮ ಹಾಗೂ ಸುವರ್ಣಮಯವಾಗಿ ಇರಲಿದೆ ಎಂದು ಹೇಳಲು ಬಯಸುತ್ತೇನೆ" ಎಂದೂ ಹೇಳಿದ್ದಾರೆ.

ಮುಚ್ಚಳಿಕೆಗೆ ಸಹಿ ಹಾಕದಿದ್ದರೆ ಏನು ಮಾಡುತ್ತೀರಿ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದಾಗ, ಅವರು ನನ್ನನ್ನು ಬಂಧಿಸುವುದಾಗಿ ಹೇಳಿದರು. ಅದಕ್ಕೆ ನಾನು, "ಆಯಿತು, ಸಂತೋಷ. ನಾನು ಜೈಲಿಗೆ ಹೋಗುತ್ತೇನೆ. - 40 ಡಿಗ್ರಿ ಸೆಲ್ಷಿಯಸ್ ತಾಪಮಾನ ಹೊಂದಿದ್ದ ಖರ್ದುಂಗ್ ಕಣಿವೆಯಲ್ಲೇ ಕೂರಲು ಹೆದರದ ವ್ಯಕ್ತಿ, ನಿಮ್ಮ ಬಂಧನಕ್ಕೆ ಹೆದರುತ್ತಾನೆಯೇ?" ಎಂದು ನಾನವರಿಗೆ ಉತ್ತರಿಸಿದೆ ಎಂದು ವಾಂಗ್‌ಚುಕ್ ಹೇಳಿಕೊಂಡಿದ್ದಾರೆ.

ವಾಂಗ್‌ಚುಕ್ ಅವರ ಕಾರ್ಯಕಾರಿ ಸಹಾಯಕ ಮಿಚೆಲ್ ಪಾವ್ರಿ ಅವರು, ಗುರುವಾರ ವಾಂಗ್‌ಚುಕ್ ಅವರು ವರ್ಚುಯಲ್ ಮಾಧ್ಯಮ ಗೋಷ್ಠಿ ನಡೆಸಲಿದ್ದು, ಅವರು ತಮ್ಮ ಉಪವಾಸ ಸತ್ಯಾಗ್ರಹಕ್ಕೆ ಸಂಬಂಧಿಸಿದ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಲಿದ್ದಾರೆ ಎಂದು ತಿಳಿಸಿದ್ದಾರೆ.

Similar News