ಜಾತಿ ವಿವಾದ: ಕೇರಳ ಫಿಲ್ಮ್‌ ಇನ್‌ಸ್ಟಿಟ್ಯೂಟ್‌ ಅಧ್ಯಕ್ಷ ಸ್ಥಾನ ತೊರೆದ ಅಡೂರು ಗೋಪಾಲಕೃಷ್ಣನ್‌

Update: 2023-01-31 14:01 GMT

ತಿರುವನಂತಪುರಂ: ಕೇರಳ ಸರ್ಕಾರ ನಡೆಸುವ ತಿರುವನಂತಪುರಂನ ಕೆ ಆರ್‌ ನಾರಾಯಣನ್‌ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ವಿಷುವಲ್‌ ಸಾಯನ್ಸಸ್‌ ಎಂಡ್‌ ಆರ್ಟ್ಸ್‌ ಇಲ್ಲಿ ಎದ್ದಿರುವ ಜಾತಿ ವಿವಾದದಿಂದಾಗಿ ಸಂಸ್ಥೆಯ ಅಧ್ಯಕ್ಷ ಸ್ಥಾನದಿಂದ ಹಿರಿಯ ಚಿತ್ರ ತಯಾರಕ ಹಾಗೂ ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಅಡೂರ್‌ ಗೋಪಾಲಕೃಷ್ಣನ್‌ ರಾಜೀನಾಮೆ ನೀಡುವಂತಾಗಿದೆ.

ಜಾತಿ ಆಧಾರಿತ ತಾರತಮ್ಯ ನಡೆಸುತ್ತಿದ್ದಾರೆ ಎಂದು ವಿದ್ಯಾರ್ಥಿಗಳ ಮತ್ತು ಸಿಬ್ಬಂದಿಗಳ ಒಂದು ಗುಂಪು ಆರೋಪ ಹೊರಿಸಿದ ಹಿನ್ನೆಲೆಯಲ್ಲಿ ಇತ್ತೀಚೆಗೆ ಸಂಸ್ಥೆಯ ನಿರ್ದೇಶಕ ಶಂಕರ್‌ ಮೋಹನ್ ರಾಜೀನಾಮೆ ನೀಡಿದ್ದನ್ನು ಇಲ್ಲಿ ಉಲ್ಲೇಖಿಸಬಹುದಾಗಿದೆ.

ಇದೀಗ ತಮ್ಮ ರಾಜೀನಾಮೆ ಘೋಷಿಸುವಾಗ ಗೋಪಾಲಕೃಷ್ಣನ್‌ ಅವರು ಮೋಹನ್ ಅವರನ್ನು ಬೆಂಬಲಿಸಿದ್ದಾರಲ್ಲದೆ ಅಧಾರರಹಿತ, ಸುಳ್ಳು ಹಾಗೂ ಮಾನಹಾನಿಕರ ಆರೋಪಗಳಿಂದ ಅವರು ತೊರೆಯುವಂತಾಯಿತು ಎಂದಿದ್ದಾರೆ.‌

ನೇಮಕಾತಿಗಳಿಗಿರುವ ಮೀಸಲಾತಿ ನಿಯಮಗಳನ್ನು ಮೋಹನ್‌ ಪಾಲಿಸಿಲ್ಲ ಹಾಗೂ ಜಾತಿ ಆಧಾರದಲ್ಲಿ ಸಿಬ್ಬಂದಿ ವಿರುದ್ಧ ತಾರತಮ್ಯ ತೋರುತ್ತಿದ್ದರು ಎಂದು ಆರೋಪಿಸಲಾಗಿದೆ.

ಮೋಹನ್‌ ಮತ್ತವರ ಪತ್ನಿ ತಮ್ಮಿಂದ ಶೌಚಾಲಯ ಸ್ವಚ್ಛಗೊಳಿಸುತ್ತಿದ್ದರು ಎಂದು ಕೆಲ ಶಿಕ್ಷಕೇತರ ಸಿಬ್ಬಂದಿ ಕೂಡ ಆರೋಪಿಸಿದ್ದರು.

ಆದರೆ ಸಂಸ್ಥೆಯನ್ನು ದೇಶದ ಅತ್ಯುನ್ನತ ಸಂಸ್ಥೆಗಳಲ್ಲೊಂದಾಗಿಸಲು ಮೋಹನ್‌ ತಮ್ಮೊಂದಿಗೆ ಕಳೆದ ಮೂರು ವರ್ಷಗಳಿಂದ ಬಹಳ ಶ್ರಮಿಸಿದ್ದರು ಎಂದು ಅಡೂರ್‌ ಗೋಪಾಲಕೃಷ್ಣನ್‌ ಹೇಳಿದ್ದಾರೆ.

Similar News