ಮ್ಯಾನ್ಮಾರ್ ಚುನಾವಣೆಯಿಂದ ಹಿಂಸಾಚಾರ ಉಲ್ಬಣದ ಸಾಧ್ಯತೆ: ವಿಶ್ವಸಂಸ್ಥೆ ಕಳವಳ

Update: 2023-01-31 14:19 GMT

ವಿಶ್ವಸಂಸ್ಥೆ, ಜ.31: ದಂಗೆಪೀಡಿತ ಮ್ಯಾನ್ಮಾರ್ ನಲ್ಲಿ ಈ ವರ್ಷ ಚುನಾವಣೆ ನಡೆಸುವ ಸೇನಾಡಳಿತದ ನಿರ್ಧಾರವು ಹಿಂಸೆಯ ದಳ್ಳುರಿಗೆ ತುಪ್ಪ ಸುರಿಯುವ ಸಾಧ್ಯತೆಯಿದೆ ಎಂದು ವಿಶ್ವಸಂಸ್ಥೆಯ ವಿಶೇಷ ಪ್ರತಿನಿಧಿ ಮಂಗಳವಾರ ಕಳವಳ ವ್ಯಕ್ತಪಡಿಸಿದ್ದು ಯೋಜಿತ ಚುನಾವಣೆಯ ವಿರುದ್ಧ ಅಂತರಾಷ್ಟ್ರೀಯ ಸಮುದಾಯ ಒಗ್ಗಟ್ಟಿನ ನಿಲುವು ತಳೆಯಬೇಕಿದೆ ಎಂದು ಆಗ್ರಹಿಸಿದೆ.

‌ಮ್ಯಾನ್ಮಾರ್ ನಲ್ಲಿ 2020ರಲ್ಲಿ ನಡೆದ ಚುನಾವಣೆಯಲ್ಲಿ ಬಹುಮತ ಪಡೆದ ಆಂಗ್ಸಾನ್ ಸೂಕಿ ನೇತೃತ್ವದ ಸರಕಾರವನ್ನು 2 ವರ್ಷದ ಹಿಂದೆ ಅಲ್ಲಿನ ಸೇನೆ ಕ್ಷಿಪ್ರಕ್ರಾಂತಿಯಲ್ಲಿ ಪದಚ್ಯುತಗೊಳಿಸಿ ಆಡಳಿತವನ್ನು ಕೈಗೆತ್ತಿಕೊಂಡಿತ್ತು. ಅಂದಿನಿಂದ ಸೂಕಿ ಸೇರಿದಂತೆ ವಿಪಕ್ಷದ ಪ್ರಮುಖ ಮುಖಂಡರನ್ನು ಬಂಧನದಲ್ಲಿಡಲಾಗಿದೆ. ದೇಶದಲ್ಲಿ ವಿಧಿಸಲಾಗಿರುವ ತುರ್ತುಪರಿಸ್ಥಿತಿ ಜನವರಿ ಅಂತ್ಯಕ್ಕೆ ಮುಕ್ತಾಯಗೊಳ್ಳಲಿದ್ದು, ಆ ಬಳಿಕ ಹೊಸದಾಗಿ ಚುನಾವಣೆ ನಡೆಯಬೇಕು ಎಂದು ದೇಶದ ಸಂವಿಧಾನದಲ್ಲಿ ಉಲ್ಲೇಖಿಸಲಾಗಿದೆ.

ಮಿಲಿಟರಿ ನೇತೃತ್ವದಲ್ಲಿ ನಡೆಯುವ ಯಾವುದೇ ಚುನಾವಣೆ ಹಿಂಚಾಚಾರ ಉಲ್ಬಣಕ್ಕೆ ಪ್ರೇರಣೆಯಾಗಲಿದೆ. ಇದು ದೇಶಕ್ಕೆ ಎದುರಾಗಿರುವ ಬಿಕ್ಕಟ್ಟನ್ನು ವಿಸ್ತರಿಸಲಿದೆ ಮತ್ತು ದೇಶವು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮತ್ತು ಸ್ಥಿರತೆಯ ಹಳಿಗೆ  ಮರಳುವ ಹಾದಿಯನ್ನು ಕಠಿಣಗೊಳಿಸಲಿದೆ ಎಂದು ವಿಶ್ವಸಂಸ್ಥೆಯ ವಿಶೇಷ ಪ್ರತಿನಿಧಿ ನೊಯಿಲೀನ್ ಹೇಝರ್ ಹೇಳಿದ್ದಾರೆ. ಸೇನಾಡಳಿತದ ಯೋಜಿತ ಚುನಾವಣೆಯ ವಿರುದ್ಧ ಅಂತರಾಷ್ಟ್ರೀಯ ಸಮುದಾಯ ಬಲವಾದ ಏಕೀಕೃತ ನಿಲುವನ್ನು ತಳೆಯಬೇಕೆಂದು ಅವರು ಆಗ್ರಹಿಸಿದ್ದಾರೆ.

ಮ್ಯಾನ್ಮಾರ್ ನಲ್ಲಿ ಚುನಾವಣೆಯು ಮತ್ತೊಂದು ಮೋಸವಾಗಿದೆ ಎಂದು ಅಮೆರಿಕ ಹೇಳಿದ್ದರೆ ಚುನಾವಣೆ ನಡೆಯುವುದನ್ನು ಬೆಂಬಲಿಸುವುದಾಗಿ ಮ್ಯಾನ್ಮಾರ್ನ ಮಿತ್ರ ರಶ್ಯ ಪ್ರತಿಕ್ರಿಯಿಸಿದೆ.

`ರಾಜಕೀಯ ನಾಯಕರು, ನಾಗರಿಕ ಸಮಾಜದ ಮುಖಂಡರು ಮತ್ತು ಪತ್ರಕರ್ತರಿಗೆ  ನಿರಂತರ ಬೆದರಿಕೆ, ಬಂಧನ ಮತ್ತು ಕಿರುಕುಳದ ನಡುವೆ ಚುನಾವಣೆಗಳನ್ನು ನಡೆಸಲು ಮಿಲಿಟರಿ ಆಡಳಿತ ಉದ್ದೇಶಿಸಿರುವ ಬಗ್ಗೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ಅವರ  ವಕ್ತಾರರು ಸೋಮವಾರ ಹೇಳಿದ್ದಾರೆ. ಮ್ಯಾನ್ಮಾರ್ ನ ಜನತೆ ತಮ್ಮ ರಾಜಕೀಯ ಹಕ್ಕುಗಳನ್ನು ಮುಕ್ತವಾಗಿ ಚಲಾಯಿಸಲು ಸಾಧ್ಯವಾಗುವ ಪರಿಸ್ಥಿತಿ ಇಲ್ಲದಿರುವಾಗ ಈ ಪ್ರಸ್ತಾವಿತ ಚುನಾವಣೆಯು ಅಸ್ಥಿರತೆಯನ್ನು ಮತ್ತಷ್ಟು ಹೆಚ್ಚಿಸುವ ಅಪಾಯವಿದೆ ಎಂದು ವಕ್ತಾರರ ಹೇಳಿಕೆ ತಿಳಿಸಿದೆ.

ಆದರೆ ಅಂತರಾಷ್ಟ್ರೀಯ ಒತ್ತಡಕ್ಕೆ ಮಣಿಯದ ಮ್ಯಾನ್ಮಾರ್ ನ ಸೇನಾಡಳಿತ ಈ ವರ್ಷ ಚುನಾವಣೆ ನಡೆಸುವ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದು ದೇಶದಲ್ಲಿ ನೂತನ ಚುನಾವಣಾ ಕಾನೂನನ್ನು ಜಾರಿಗೊಳಿಸಿದ್ದು ಇದಕ್ಕೆ ಅನುಗುಣವಾಗಿ ಆಸಕ್ತ ರಾಜಕೀಯ ಪಕ್ಷಗಳು ತಮ್ಮ ಹೆಸರನ್ನು ಮರುನೋಂದಾಯಿಸಿಕೊಂಡರೆ ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶವಿದೆ ಎಂದು ಸೂಚಿಸಿದೆ.

ಈಗಿನ ಪರಿಸ್ಥಿತಿಯಲ್ಲಿ ಯೋಜಿತ ಚುನಾವಣೆ ಮುಕ್ತ ಮತ್ತು ನ್ಯಾಯಸಮ್ಮತ ಆಗಿರದು ಎಂದು ವಿಶ್ವಸಂಸ್ಥೆಯ ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ. 

Similar News