ಪಾಕಿಸ್ತಾನ: ಆತ್ಮಾಹುತಿ ಬಾಂಬ್ ದಾಳಿ; ಶಂಕಿತ ಉಗ್ರನ ರುಂಡ ಪತ್ತೆ ಮೃತರ ಸಂಖ್ಯೆ 93ಕ್ಕೆ ಏರಿಕೆ

Update: 2023-01-31 14:45 GMT

ಇಸ್ಲಾಮಾಬಾದ್, ಜ.31: ಪಾಕಿಸ್ತಾನದ ಪೇಷಾವರದ ಮಸೀದಿಯಲ್ಲಿ ಸೋಮವಾರ ನಡೆದಿದ್ದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 93ಕ್ಕೇರಿದ್ದು 221 ಮಂದಿ ತೀವ್ರ ಗಾಯಗೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಮಧ್ಯೆ ಬಾಂಬ್ ದಾಳಿ ನಡೆದ ಸ್ಥಳದಲ್ಲಿ ವ್ಯಕ್ತಿಯ ರುಂಡವೊಂದು ಪತ್ತೆಯಾಗಿದ್ದು ಇದು ಆತ್ಮಾಹುತಿ ದಾಳಿ ನಡೆಸಿದ ಶಂಕಿತ ಉಗ್ರನ ರುಂಡವಾಗಿರಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಸ್ಫೋಟದ ತೀವ್ರತೆಗೆ ಕುಸಿದು ಬಿದ್ದಿರುವ ಕಟ್ಟಡಗಳ ಅವಶೇಷಗಳಡಿ ಸಿಲುಕಿಕೊಂಡಿರುವ ಮೃತದೇಹಗಳನ್ನು ಅಲ್ಲಿಂದ ಹೊರತೆಗೆಯುವ ಕಾರ್ಯಾಚರಣೆ ಇನ್ನೂ ಮುಂದುವರಿದಿದೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಬಹುದು ಎಂದು ಪೊಲೀಸರನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

ಪೊಲೀಸ್ ಲೈನ್ ಪ್ರದೇಶದಲ್ಲಿರುವ ಮಸೀದಿಯಲ್ಲಿ ಮಧ್ಯಾಹ್ನ ಪ್ರಾರ್ಥನೆ ಸಂದರ್ಭ ಮೊದಲಿನ ಸಾಲಿನಲ್ಲಿ ನಿಂತಿದ್ದ ಶಂಕಿತ ಉಗ್ರ ತನ್ನನ್ನು ಸ್ಫೋಟಿಸಿಕೊಂಡಿದ್ದಾನೆ. ಸ್ಫೋಟದ ತೀವ್ರತೆಗೆ ಮಸೀದಿಯ ಚಾವಣಿ ಕುಸಿದು ಕೆಳಗೆ ನಿಂತಿದ್ದವರ ಮೇಲೆ ಬಿದ್ದಿದೆ. ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದವರಲ್ಲಿ ಪೊಲೀಸ್ ಸಿಬ್ಬಂದಿ, ಸೇನಾ ಸಿಬ್ಬಂದಿ, ಬಾಂಬ್ ನಿಷ್ಕ್ರಿಯ ದಳದವರು ಹೆಚ್ಚಿನ ಸಂಖ್ಯೆಯಲ್ಲಿದ್ದರು.

ದಾಳಿಕೋರ ಸ್ಫೋಟ ನಡೆಯುವುದಕ್ಕೆ ತುಸು ಮೊದಲು ಪೊಲೀಸ್ ಲೈನ್ ಪ್ರದೇಶಕ್ಕೆ ಆಗಮಿಸಿದ್ದ. ಅತ್ಯಂತ ಬಿಗಿಭದ್ರತೆಯ ಈ ಪ್ರದೇಶಕ್ಕೆ ಆತ ಸರಕಾರದ ವಾಹನದಲ್ಲಿ ಆಗಮಿಸಿರುವ ಸಾಧ್ಯತೆಯಿದೆ ಎಂದು ಪೇಷಾವರ ಕ್ಯಾಪಿಟಲ್ ಸಿಟಿ ಪೊಲೀಸ್ ಅಧಿಕಾರಿ ಮುಹಮ್ಮದ್ ಇಜಾಝ್ ಖಾನ್ ರನ್ನು ಉಲ್ಲೇಖಿಸಿ ಜಿಯೊ ಟಿವಿ ವರದಿ ಮಾಡಿದೆ.

ಬಾಂಬ್ ದಾಳಿಯ ಹಿನ್ನೆಲೆಯಲ್ಲಿ ಪ್ರಾಂತದಲ್ಲಿ ಒಂದು ದಿನದ ಶೋಕಾಚರಣೆ ಘೋಷಿಸಲಾಗಿದೆ ಎಂದು ಖೈಬರ್ ಪಖ್ತೂಂಕ್ವಾದ ಉಸ್ತುವಾರಿ ಮುಖ್ಯಮಂತ್ರಿ ಮುಹಮ್ಮದ್ ಅಝಂಖಾನ್ ಮಂಗಳವಾರ ಹೇಳಿದ್ದಾರೆ. ಕಳೆದ ವರ್ಷದ ಆಗಸ್ಟ್ನಲ್ಲಿ ಅಫ್ಘಾನ್ ನಲ್ಲಿ ಹತ್ಯೆಯಾದ ತನ್ನ ಕಮಾಂಡರ್ ಉಮರ್ ಖಾಲಿದ್ ಖುರಸಾನಿಯ ಹತ್ಯೆಗೆ ಪ್ರತೀಕಾರವಾಗಿ ಆತ್ಮಾಹುತಿ ಬಾಂಬ್ ದಾಳಿ ನಡೆದಿದೆ ಎಂದು ತೆಹ್ರೀಕೆ ತಾಲಿಬಾನ್ ಪಾಕಿಸ್ತಾನ್(ಟಿಟಿಪಿ) ಹೇಳಿದೆ.

Similar News