2023-24ರಲ್ಲಿ ಭಾರತದ ಆರ್ಥಿಕತೆಯ ಬೆಳವಣಿಗೆ ಶೇ.6ರಿಂದ ಶೇ.6.8: ಆರ್ಥಿಕ ಸಮೀಕ್ಷೆಯ ಅಂದಾಜು

Update: 2023-01-31 16:20 GMT

ಹೊಸದಿಲ್ಲಿ,ಜ.31: ಪ್ರಸ್ತುತ ವರ್ಷ (2022-23)ದ ಶೇ.7ರ ಮುನ್ನಂದಾಜಿಗೆ ಹೋಲಿಸಿದರೆ ಭಾರತದ ಜಿಡಿಪಿ ಬೆಳವಣಿಗೆಯು 2023-24ನೇ ಹಣಕಾಸು ವರ್ಷದಲ್ಲಿ ಶೇ.6ರಿಂದ ಶೇ.6.8ರಷ್ಟು ಬೆಳವಣಿಗೆಯಾಗಲಿದೆ ಎಂದು ಸರಕಾರದ ವಾರ್ಷಿಕ ಆರ್ಥಿಕ ಸಮೀಕ್ಷೆಯು ಅಂದಾಜಿಸಿದೆ.

ಕೇಂದ್ರ ಮುಂಗಡಪತ್ರದ ಮುನ್ನಾದಿನವಾದ ಮಂಗಳವಾರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ ಮಂಡಿಸಿದ ಸಮೀಕ್ಷೆಯು ದೇಶದ ಆರ್ಥಿಕತೆಯ ಸ್ಥಿತಿಯನ್ನು ವಿವರಿಸಿದೆ ಮತ್ತು ವೇಗದ ಬೆಳವಣಿಗೆಗಾಗಿ ನೀತಿ ಕ್ರಮಗಳನ್ನು ಸೂಚಿಸಿದೆ. ಆದರೆ ಹೆಚ್ಚಿನ ಸಲ ಆರ್ಥಿಕ ಸಮೀಕ್ಷೆಗಳು ಗುರಿಗಳನ್ನು ತಪ್ಪಿಸಿಕೊಂಡಿವೆ.

ಸರಕಾರದ ಮುನ್ನಂದಾಜು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್)ಯ ಅಂದಾಜಿಗಿಂತ ಹೆಚ್ಚಿದೆ. ಐಎಂಎಫ್ 2023-24ನೇ ಸಾಲಿಗೆ ಶೇ.6.1ರಷ್ಟು ಭಾರತದ ಆರ್ಥಿಕತೆಯ ಬೆಳವಣಿಗೆಯನ್ನು ಅಂದಾಜಿಸಿದೆ.

ಸರಕಾರದ ಆರ್ಥಿಕ ಸಮೀಕ್ಷೆಯು 2023-24ರಲ್ಲಿ ನೈಜ ಪರಿಭಾಷೆಯಲ್ಲಿ ಶೇ.6.5ರಷ್ಟು ಮೂಲ ಜಿಡಿಪಿ ಬೆಳವಣಿಗೆಯನ್ನು ಅಂದಾಜಿಸಿದೆ. ಕೆಳಮುಖ ಪರಿಷ್ಕರಣೆಯ ಹೊರತಾಗಿಯೂ 2023ನೇ ವಿತ್ತವರ್ಷಕ್ಕೆ ಬೆಳವಣಿಗೆ ಅಂದಾಜು ಹೆಚ್ಚಿನ ಎಲ್ಲ ಪ್ರಮುಖ ಆರ್ಥಿಕತೆಗಳಿಗಿಂತ ಮೇಲೆಯೇ ಇದೆ ಮತ್ತು ಸಾಂಕ್ರಾಮಿಕದ ಮೊದಲಿನ ದಶಕದಲ್ಲಿಯ ಭಾರತೀಯ ಆರ್ಥಿಕತೆಯ ಸರಾಸರಿ ಬೆಳವಣಿಗೆ ದರಕ್ಕಿಂತ ಕೊಂಚ ಹೆಚ್ಚೇ ಇದೆ ಎಂದು ಸಮೀಕ್ಷೆಯ ವರದಿಯು ತಿಳಿಸಿದೆ. 2021-22ರಲ್ಲಿ ಭಾರತೀಯ ಆರ್ಥಿಕತೆಯು ಶೇ.8.7ರಷ್ಟು ಬೆಳವಣಿಗೆಗೆ ಸಾಕ್ಷಿಯಾಗಿತ್ತು.

ಕೊರೋನವೈರಸ್ ಸಾಂಕ್ರಾಮಿಕದ ಸಂದರ್ಭದಲ್ಲಿ ಮತ್ತು ಯುರೋಪ್ನಲ್ಲಿ ಬಿಕ್ಕಟ್ಟಿನಿಂದಾಗಿ ನಿಧಾನಗೊಂಡಿದ್ದ ಆರ್ಥಿಕತೆಯು ಕಳೆದುಕೊಂಡಿದ್ದನ್ನು ಹೆಚ್ಚುಕಡಿಮೆ ಮರಳಿ ಪಡೆದುಕೊಂಡಿದೆ ಮತ್ತು ಚೇತರಿಸಿಕೊಂಡಿದೆ ಎಂದೂ ಸಮೀಕ್ಷೆಯು ಹೇಳಿದೆ. ಹಣದುಬ್ಬರವು ವೈಯಕ್ತಿಕ ಬಳಕೆಯನ್ನು ತಡೆಯುವಷ್ಟು ಹೆಚ್ಚಿಲ್ಲ ಅಥವಾ ಹೂಡಿಕೆಗೆ ಪ್ರೇರಣೆಯನ್ನು ದುರ್ಬಲಗೊಳಿಸುವಷ್ಟು ಕಡಿಮೆಯೂ ಇಲ್ಲ ಎಂದು ಅದು ತಿಳಿಸಿದೆ. ಜಾಗತಿಕ ಸರಕುಗಳ ಬೆಲೆಯೇರಿಕೆಯಿಂದಾಗಿ ಅಧಿಕ ಮಟ್ಟದಲ್ಲಿಯೇ ಉಳಿದುಕೊಳ್ಳಬಹುದಾದ ಚಾಲ್ತಿ ಖಾತೆ ಕೊರತೆಯ ಮೇಲೆ ನಿಗಾಯಿರಿಸುವ ಅಗತ್ಯಕ್ಕೂ ಆರ್ಥಿಕ ಸಮೀಕ್ಷೆಯು ಒತ್ತು ನೀಡಿದೆ.

Similar News