ಧನಬಾದ್ ಬೆಂಕಿ ಆಕಸ್ಮಿಕ: ಮೃತರ ಸಂಖ್ಯೆ 14ಕ್ಕೆ ಏರಿಕೆ

Update: 2023-02-01 02:33 GMT

ಧನಬಾದ್: ಜಾರ್ಖಂಡ್‌ನ ಧನಬಾದ್‌ನ ಬಹುಮಹಡಿ ಕಟ್ಟಡದಲ್ಲಿ ಮಂಗಳವಾರ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 14ಕ್ಕೇರಿದೆ. ಮೃತಪಟ್ಟವರಲ್ಲಿ ಬಹುತೇಕ ಮಂದಿ ಮಹಿಳೆಯರು ಮತ್ತು ಮಕ್ಕಳು ಎಂದು ಹೇಳಲಾಗುತ್ತಿದೆ.

ಧನಬಾದ್‌ನ ಜೋರಾಪಾಠಕ್ ಪ್ರದೇಶದ ಆಶೀರ್ವಾದ್ ಟವರ್‌ನಲ್ಲಿ ಸಂಜೆ 6 ಗಂಟೆ ವೇಳೆಗೆ ದುರಂತ ಸಂಭವಿಸಿತ್ತು. "10 ಮಹಿಳೆಯರು ಮತ್ತು ಮೂವರು ಮಕ್ಕಳು ಭೀಕರ ಬೆಂಕಿ ಆಕಸ್ಮಿಕದಲ್ಲಿ ಮೃತಪಟ್ಟಿದ್ದಾರೆ. ಪರಿಹಾರ ಕಾರ್ಯಾಚರಣೆ ಮುಂದುರಿದಿದೆ" ಎಂದು ಧನಬಾದ್ ಡಿಸಿ ಸಂದೀಪ್ ಸಿಂಗ್ ಹೇಳಿದ್ದಾಗಿ ಎಎನ್‌ಐ ವರದಿ ಮಾಡಿದೆ.

ಘಟನೆಯಲ್ಲಿ ಇತರ 12 ಮಂದಿ ಗಾಯಗೊಂಡಿದ್ದಾರೆ. ಮದುವೆ ಸಮಾರಂಭದಲ್ಲಿ ಭಾಗವಹಿಸುವ ಸಲುವಾಗಿ ಆಗಮಿಸಿದ್ದ ಹಲವು ಮಂದಿ ದುರಂತ ನಡೆದ ಸಂದರ್ಭದಲ್ಲಿ ಕಟ್ಟಡದಲ್ಲಿದ್ದರು. ಬೆಂಕಿ ಆಕಸ್ಮಿಕಕ್ಕೆ ಕಾರಣ ತಿಳಿದು ಬಂದಿಲ್ಲ. "ಪರಿಹಾರ ಕಾರ್ಯಕ್ಕೆ ಹೆಚ್ಚಿನ ಗಮನ ಹರಿಸಲಾಇದ್ದು, ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿದೆ" ಎಂದು ಎಸ್‌ಎಸ್ಪಿ ಸಂಜೀವ್ ಕುಮಾರ್ ವಿವರ ನೀಡಿದ್ದಾರೆ.

ಪರಿಹಾರ ಮತ್ತು ಶೋಧ ಕಾರ್ಯಾಚರಣೆ ಮುಗಿದಿದ್ದು, 14 ಮಂದಿ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ದೇಹಸ್ಥಿತಿ ಸ್ಥಿರವಾಗಿದೆ. ಕಟ್ಟಡಕ್ಕೆ ಭಾಗಶಃ ಹಾನಿಯಾಗಿದ್ದು, ಬೆಂಕಿ ನಂದಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ. ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರು ದುರಂತದ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ.

Similar News