ಇಂದಿರಾ, ರಾಜೀವ್ ಅವರ ಹತ್ಯೆ ಆಕಸ್ಮಿಕ ಎಂದ ಉತ್ತರಾಖಂಡ ಸಚಿವ ಗಣೇಶ್ ಜೋಶಿ !

Update: 2023-02-01 03:28 GMT

ಡೆಹ್ರಾಡೂನ್: ಹುತಾತ್ಮ ಪಟ್ಟ ಗಾಂಧಿ ಕುಟುಂಬದ ಏಕಸ್ವಾಮ್ಯವಲ್ಲ; ಇಂದಿರಾಗಾಂಧಿ ಹಾಗೂ ರಾಜೀವ್‌ಗಾಂಧಿಯವರ ಹತ್ಯೆ ಪ್ರಕರಣಗಳು ಆಕಸ್ಮಿಕ ಎಂದು ಉತ್ತರಾಖಂಡ ಸಚಿವ ಗಣೇಶ್ ಜೋಶಿ ಹೇಳಿದ್ದಾರೆ.

"ರಾಹುಲ್‌ಗಾಂಧಿಯವರ ಬುದ್ಧಿವಂತಿಕೆ ಬಗ್ಗೆ ನನಗೆ ಅನುಕಂಪ ಇದೆ. ಹುತಾತ್ಮ ಪಟ್ಟ ಗಾಂಧಿ ಕುಟುಂಬದ ಏಕಸ್ವಾಮ್ಯವಲ್ಲ. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಗತ್ ಸಿಂಗ್, ಸಾವರ್ಕರ್, ಚಂದ್ರಶೇಖರ್ ಆಜಾದ್ ಅವರಂಥ ಹಲವು ಮಂದಿ ಹುತಾತ್ಮರಾಗಿದ್ದಾರೆ. ಗಾಂಧಿ ಕುಟುಂಬದ ಸದಸ್ಯರ ಹತ್ಯೆ ಆಕಸ್ಮಿಕಗಳು. ಇಂಥ ಆಕಸ್ಮಿಕ ಹಾಗೂ ಹುತಾತ್ಮತೆಗೆ ವ್ಯತ್ಯಾಸವಿದೆ" ಎಂದು ಜೋಶಿ ವಿವರಿಸಿದ್ದಾರೆ.

ಶ್ರೀನಗರದಲ್ಲಿ ಭಾರತ್ ಜೋಡೊ ಯಾತ್ರೆ ಸಮಾರೋಪದ ವೇಳೆ ಕಾಂಗ್ರೆಸ್ ಮುಖಂಡರು ಮಾಡಿದ ಭಾಷಣಕ್ಕೆ ಸಂಬಂಧಿಸಿದಂತೆ ವರದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, "ವ್ಯಕ್ತಿಗಳು ತಮ್ಮ ಬುದ್ಧಿವಂತಿಕೆಯ ಮಟ್ಟಕ್ಕೆ ಅನುಸಾರವಾಗಿ ಮಾತನಾಡಬಹುದು" ಎಂದು ಹೇಳಿದರು.

ರಾಹುಲ್‌ಗಾಂಧಿಯವರ ಭಾರತ್ ಜೋಡೊ ಯಾತ್ರೆ ಜಮ್ಮು ಮತ್ತು ಕಾಶ್ಮೀರದಲ್ಲಿ ಸುಸೂತ್ರವಾಗಿ ಮುಕ್ತಾಯಗೊಂಡಿದೆ ಎಂದಾದರೆ ಅದರ ಕೀರ್ತಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲ್ಲಬೇಕು ಎಂದು ಕೃಷಿ, ರೈತಕಲ್ಯಾಣ, ಗ್ರಾಮೀಣಾಭಿವೃದ್ಧಿ ಮತ್ತ ಸೈನಿಕ ಕಲ್ಯಾಣ ಖಾತೆಯ ರಾಜ್ಯಸಚಿವರಾದ ಜೋಶಿ ಬಣ್ಣಿಸಿದರು.

"ಇದರ ಕೀರ್ತಿ ಪ್ರಧಾನಿಗೆ ಸಲ್ಲಬೇಕು. 370ನೇ ವಿಧಿಯನ್ನು ರದ್ದುಪಡಿಸದೇ ಇದ್ದಿದ್ದರೆ ಹಾಗೂ ಜಮ್ಮು ಕಾಶ್ಮೀರದಲ್ಲಿ ಸಹಜತೆ ಮರಳದೇ ಇದ್ದಲ್ಲಿ, ರಾಹುಲ್‌ಗಾಂಧಿ ಲಾಲ್‌ಚೌಕದಲ್ಲಿ ತ್ರಿವರ್ಣಧ್ವಜ ಹಾರಿಸಲು ಸಾಧ್ಯವಾಗುತ್ತಿರಲಿಲ್ಲ. ಜಮ್ಮು ಕಾಶ್ಮೀರದಲ್ಲಿ ಹಿಂಸೆ ಉತ್ತುಂಗದಲ್ಲಿದ್ದ ವೇಳೆ ಮುರಳಿ ಮನೋಹರ್ ಜೋಶಿ ಲಾಲ್‌ಚೌಕದಲ್ಲಿ ತ್ರಿವರ್ಣ ಧ್ವಜ ಹಾರಿಸಿದ್ದರು ಎಂದು ಹೇಳಿದರು.

Similar News