1.2 ಶತಕೋಟಿ ಡಾಲರ್‌ಗೆ ಇಸ್ರೇಲ್‌ನ ಹೈಫಾ ಬಂದರು ಸ್ವಾಧೀನ ಪಡಿಸಿಕೊಂಡ ಅದಾನಿ ಸಮೂಹ

Update: 2023-02-01 05:26 GMT

ಹೈಫಾ, ಇಸ್ರೇಲ್: ಕಂಪನಿಯ ಷೇರುಗಳು ಸತತವಾಗಿ ಕುಸಿತ ಕಾಣುತ್ತಿರುವ ನಡುವೆಯೇ ಅದಾನಿ ಉದ್ಯಮ ಸಮೂಹ ಇಸ್ರೇಲ್‌ನ ಆಯಕಟ್ಟಿನ ಹೈಫಾ ಬಂದರನ್ನು 120 ಕೋಟಿ ಡಾಲರ್‌ಗೆ ಖರೀದಿಸಿದೆ. ಈ ಯಹೂದಿ ದೇಶದಲ್ಲಿ ಹೆಚ್ಚು ಹೂಡಿಕೆ ಮಾಡುವ ತನ್ನ ನಿರ್ಧಾರದ ಭಾಗವಾಗಿ ಈ ಮೆಡಿಟರೇರಿಯನ್ ನಗರವನ್ನು ಸಂಪೂರ್ಣವಾಗಿ ಪರಿವರ್ತಿಸಲು ಮುಂದಾಗಿದೆ. ಟೆಲ್ ಅವೀವ್‌ನಲ್ಲಿ ಕೃತಕ ಬುದ್ಧಿಮತ್ತೆ ಪ್ರಯೋಗಾಲಯ ತೆರೆಯುವುದೂ ಇದರಲ್ಲಿ ಸೇರಿದೆ.

ಅಮೆರಿಕದ ಹಿಂಡೆನ್‌ಬರ್ಗ್ ರೀಸರ್ಚ್ ಮಾಡಿದ ಆರೋಪಗಳಿಂದಾಗಿ ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿಯವರ ವ್ಯವಹಾರ ಸಾಮ್ರಾಜ್ಯ ಕಂಪಿಸುತ್ತಿರುವ ನಡುವೆಯೇ, ಗೌತಮ್ ಅದಾನಿ, ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಜತೆ ಹೈಫಾ ಬಂದರು ಸ್ವಾಧೀನಕ್ಕೆ ಪಡೆಯುವ ಒಪ್ಪಂದಕ್ಕೆ ಸಹಿ ಮಾಡಿದ್ದಾರೆ ಹಾಗೂ ಹೂಡಿಕೆ ಅವಕಾಶಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ.

ಅದಾನಿ ಸಮೂಹದ ಜತೆಗೆ ಒಪ್ಪಂದ ಮಾಡಿಕೊಂಡ ಬಳಿಕ ಮಾತನಾಡಿದ ನೆತನ್ಯಾಹು, ಇದೊಂದು ಬೃಹತ್ ಮೈಲುಗಲ್ಲು ಎಂದು ಬಣ್ಣಿಸಿದ್ದಾರೆ. ಇದು ಎರಡು ದೇಶಗಳ ನಡುವಿನ ಸಂಪರ್ಕ ಸುಧಾರಿಸುವಲ್ಲಿ ಮಹತ್ವದ ಹೆಜ್ಜೆಯಾಗಲಿದೆ ಎಂದು ಹೇಳಿದ್ದಾರೆ.

"ಇದು ಬೃಹತ್ ಮೈಲುಗಲ್ಲು... 10 ವರ್ಷಗಳ ಹಿಂದೆ ಮತ್ತು ಒಂದನೇ ಮಹಾಯುದ್ಧದ ಅವಧಿಯಲ್ಲಿ, ದಿಟ್ಟ ಭಾರತೀಯ ಸೈನಿಕರು ಹೈಫಾ ನಗರ ವಿಮೋಚನೆಗೆ ನೆರವಾಗಿದ್ದರು.ಇಂದು ಭಾರತದ ಹೂಡಿಕೆದಾರರು ಹೈಫಾ ಬಂದರು ವಿಮೋಚನೆಗೆ ನೆರವಾಗಿದ್ದಾರೆ ಎಂದು ನೆತನ್ಯಾಹು ಬಣ್ಣಿಸಿದ್ದಾರೆ.

Similar News