47.8 ಕೋಟಿ ಜನರಲ್ಲಿ ಜನಧನ್ ಖಾತೆ: ನಿರ್ಮಲಾ ಸೀತಾರಾಮನ್

Update: 2023-02-01 07:10 GMT

ಹೊಸದಿಲ್ಲಿ: ರಾಷ್ಟ್ರೀಯ ಆರ್ಥಿಕ ಒಳಗೊಳ್ಳುವಿಕೆ ಕಾರ್ಯಕ್ರಮದ ಭಾಗವಾಗಿ 2014ರಲ್ಲಿ ಪ್ರಾರಂಭವಾದ ಜನಧನ್ ಯೋಜನೆಯಡಿ ಸರಿಸುಮಾರು 47.8. ಕೋಟಿ ಖಾತೆಗಳನ್ನು ತೆರೆಯಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2023-24 ಬಜೆಟ್ ಮಂಡನೆಯ ವೇಳೆ ತಿಳಿಸಿದ್ದಾರೆ ಎಂದು ndtv.com ವರದಿ ಮಾಡಿದೆ.

ಬುಧವಾರ ಲೋಕಸಭೆಯಲ್ಲಿ 2023-24ನೇ ಸಾಲಿನ ಬಜೆಟ್ ಮಂಡಿಸಿ ಮಾತನಾಡಿದ ಅವರು, ರಾಷ್ಟ್ರೀಯ ಗ್ರಾಮೀಣ ಜೀವನ ಕಾರ್ಯಕ್ರಮವು ಗಮನಾರ್ಹ ಯಶಸ್ಸು ಸಾಧಿಸಿದ್ದು, ಈ ಕಾರ್ಯಕ್ರಮದಡಿ ಒಂದು ಲಕ್ಷ ಮಹಿಳಾ ಸ್ವಸಹಾಯ ಗುಂಪುಗಳು ನೋಂದಾಯಿಸಿಕೊಂಡಿವೆ ಎಂದು ಹೇಳಿದ್ದಾರೆ.

ಇದಲ್ಲದೆ, ಈವರೆಗೆ 9.6 ಕೋಟಿ ಅಡುಗೆ ಅನಿಲ ಸಂಪರ್ಕಗಳನ್ನು ಒದಗಿಸಲಾಗಿದ್ದು, 102 ಕೋಟಿ ಜನರಿಗೆ 220 ಕೋಟಿ ಕೋವಿಡ್ ಲಸಿಕೆಗಳನ್ನು ನೀಡಲಾಗಿದೆ ಎಂದೂ ತಿಳಿಸಿದ್ದಾರೆ.

ಪ್ರವಾಸೋದ್ಯಮ ವಲಯವು ಭಾರಿ ಪ್ರಮಾಣದ ಸಾಮರ್ಥ್ಯ ಹೊಂದಿದ್ದು, ಪ್ರವಾಸೋದ್ಯಮ ಉತ್ತೇಜನಾ ಕ್ರಮಗಳನ್ನು ಯುದ್ಧೋಪಾದಿಯಲ್ಲಿ ಕೈಗೊಳ್ಳಬೇಕಿದೆ. ಹಸಿರು ಇಂಧನ ಬೆಳವಣಿಗೆಗಾಗಿನ ಪ್ರಯತ್ನಗಳು ಇಂಗಾಲದ ಸಾಂದ್ರತೆಯನ್ನು ತಗ್ಗಿಸಿ, ಹಸಿರು ಇಂಧನ ವಲಯದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಪ್ರತಿಪಾದಿಸಿದ್ದಾರೆ.

2014ರ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜನಧನ್ ಯೋಜನೆಯನ್ನು ಘೋಷಿಸಿದ್ದರು. ಅದೇ ವರ್ಷ ಆಗಸ್ಟ್ 28ರಂದು ಈ ಯೋಜನೆ ಜಾರಿಗೆ ಬಂದಿತ್ತು. ಪ್ರಧಾನ ಮಂತ್ರಿ ಜನಧನ್ ಯೋಜನೆಯು ಉಳಿತಾಯ ಮತ್ತು ಠೇವಣಿ ಖಾತೆಗಳು, ಪಾವತಿ, ಸಾಲ, ವಿಮೆ ಮತ್ತು ಪಿಂಚಣಿಯಂಥ ಆರ್ಥಿಕ ಸೇವೆಗಳಿಗೆ  ಸಹನೀಯ ಸ್ವರೂಪದಲ್ಲಿ ಅವಕಾಶ ಒದಗಿಸುವ ರಾಷ್ಟ್ರೀಯ ಕಾರ್ಯಕ್ರಮವಾಗಿತ್ತು.

Similar News