ಪ್ರತಿ ತಿಂಗಳು ಟಿವಿ ವಾಹಿನಿಗಳು 15 ಗಂಟೆ ರಾಷ್ಟ್ರೀಯ ಹಿತಾಸಕ್ತಿ ವಿಷಯ ಪ್ರಸಾರ ಮಾಡಬೇಕು: ಕೇಂದ್ರದ ಹೊಸ ಸುತ್ತೋಲೆ

Update: 2023-02-01 13:06 GMT

ಹೊಸದಿಲ್ಲಿ: ಮಾರ್ಚ್‌ ತಿಂಗಳಿನಿಂದ ಆರಂಭಿಸಿ ಎಲ್ಲಾ ಖಾಸಗಿ ಟಿವಿ ವಾಹಿನಿಗಳು ಪ್ರತಿ ತಿಂಗಳು ಒಟ್ಟು 15 ಗಂಟೆಗಳ ಕಾಲ ರಾಷ್ಟ್ರೀಯ ಹಿತಾಸಕ್ತಿ ಕುರಿತಾದ ಕಾರ್ಯಕ್ರಮಗಳನ್ನು ಪ್ರಸಾರ ಮಾಡಬೇಕು ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಸುತ್ತೋಲೆ ಹೊರಡಿಸಿದೆ.

ಪ್ರಸಾರವಾಗುವ ಯಾವುದೇ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಹಿತಾಸಕ್ತಿಯ ವಿಷಯವನ್ನು ಸೇರಿಸಬಹುದು ಹಾಗೂ ಈ ರಾಷ್ಟ್ರೀಯ ಹಿತಾಸಕ್ತಿಯ ವಿಷಯ ಒಂದೇ ಬಾರಿಗೆ 30 ನಿಮಿಷ ಅವಧಿಗೆ ಪ್ರಸಾರ ಮಾಡಬೇಕೆಂದೇನಿಲ್ಲ ಎಂದು ಸಚಿವಾಲಯ ಹೇಳಿದೆ. ಆದರೆ ಮಧ್ಯರಾತ್ರಿಯಿಂದ ಬೆಳಿಗ್ಗೆ 6 ಗಂಟೆ ಅವಧಿಯಲ್ಲಿ ಇಂತಹ ವಿಷಯ ಪ್ರಸಾರ ಮಾಡುವಂತಿಲ್ಲ.

ಈ ರೀತಿ ಪ್ರಸಾರ ಮಾಡಿದ ರಾಷ್ಟ್ರೀಯ ಹಿತಾಸಕ್ತಿ ವಿಷಯದ ಕಾರ್ಯಕ್ರಮದ ದಾಖಲೆಯನ್ನು 90 ದಿನಗಳ ಕಾಲ ಇಟ್ಟುಕೊಳ್ಳಬೇಕು. ಇದನ್ನು ಸಚಿವಾಲಯದ ಇಲೆಕ್ಟ್ರಾನಿಕ್‌ ಮೀಡಿಯಾ ಮಾನಿಟರಿಂಗ್‌ ಸೆಂಟರ್‌ ಇರಿಸಿಕೊಳ್ಳಲಿದೆ ಎಂದು ಸಚಿವಾಲಯದ ಸುತ್ತೋಲೆ ತಿಳಿಸಿದೆ. ಟಿವಿ ವಾಹಿನಿಗಳು ತಾವು ಪ್ರಸಾರ ಮಾಡಿದ ರಾಷ್ಟ್ರೀಯ ಹಿತಾಸಕ್ತಿ ಕಾರ್ಯಕ್ರಮದ ಮಾಸಿಕ ವರದಿಯನ್ನು ಬ್ರಾಡ್‌ಕಾಸ್ಟ್‌ ಸೇವಾ ಪೋರ್ಟಲ್‌ನಲ್ಲಿ ಸಲ್ಲಿಸಬೇಕಿದೆ.

ವಿಷಯವನ್ನು ವಾಹಿನಿಗಳು ಹಂಚಿಕೊಳ್ಳಬಹುದು ಹಾಗೂ ಪರಸ್ಪರ ಅದೇ ಕಾರ್ಯಕ್ರಮ ಪ್ರಸಾರ ಮಾಡಬಹುದಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಶಿಕ್ಷಣ, ಸಾಕ್ಷರತೆ, ಕೃಷಿ, ಗ್ರಾಮೀಣಾಭಿವೃದ್ಧಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವಿಜ್ಞಾನ ಮತ್ತು ತಂತ್ರಜ್ಞಾನ, ಮಹಿಳಾ ಕಲ್ಯಾಣ, ಸಮಾಜದ ದುರ್ಬಲ ವರ್ಗಗಳ ಕಲ್ಯಾಣ, ಪರಿಸರ ರಕ್ಷಣೆ, ಸಾಂಸ್ಕೃತಿಕ ಪರಂಪರೆಯ ರಕ್ಷಣೆ ಮತ್ತು ರಾಷ್ಟ್ರೀಯ ಏಕತೆ ವಿಚಾರಗಳ ವಿಷಯವನ್ನು ಆಯ್ದುಕೊಳ್ಳಬಹುದೆಂದು ಸಚಿವಾಲಯ ಹೇಳಿದೆ.

ಈ ಸುತ್ತೋಲೆಯು ಹೊರತುಪಡಿಸಿದ ಅಥವಾ ಇಂತಹ ಕಾರ್ಯಕ್ರಮ ಪ್ರಸಾರ ಮಾಡಲು ಸಾಧ್ಯವಾಗದ ವಾಹಿನಿಗಳು ಎಂದು ನಿರ್ದಿಷ್ಟವಾಗಿ ಗುರುತಿಸಲಾದ ವಾಹಿನಿಗಳನ್ನು ಹೊರತುಪಡಿಸಿ ಎಲ್ಲಾ ವಾಹಿನಿಗಳಿಗೆ ಅನ್ವಯವಾಗುತ್ತದೆ.  ಹನ್ನೆರಡು ಗಂಟೆಗಳಿಗೂ ಹೆಚ್ಚು ಕಾಲ ಭಕ್ತಿ/ಆಧ್ಯಾತ್ಮಿಕ/ಯೋಗ ಸಂಬಂಧಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ವಾಹಿನಿಗಳಿಗೆ ಮಾಸಿಕ ವರದಿ ಸಲ್ಲಿಕೆಯಿಂದ ವಿನಾಯಿತಿಯಿದೆ.

ಮಾರ್ಗಸೂಚಿಯನ್ನು ಪಾಲಿಸದ ವಾಹಿನಿಗಳಿಂದ ವಿವರಣೆ ಕೇಳಲಾಗುವುದು ಎಂದು ಸಚಿವಾಲಯ ತಿಳಿಸಿದೆ.

Similar News