ಏಷ್ಯಾದ ಶ್ರೀಮಂತ ವ್ಯಕ್ತಿ ಪಟ್ಟ ಕಳೆದುಕೊಂಡ ಗೌತಮ್‌ ಅದಾನಿ

ಫೋರ್ಬ್ಸ್‌ ಪಟ್ಟಿಯಲ್ಲೂ 15ನೇ ಸ್ಥಾನಕ್ಕೆ ಕುಸಿತ

Update: 2023-02-01 13:28 GMT

ಬೆಂಗಳೂರು: ಅದಾನಿ ಸಮೂಹವು ವ್ಯಾಪಕ ಅವ್ಯವಹಾರಗಳನ್ನು ನಡೆಸಿದೆ ಎಂಬ ಆರೋಪ ಹೊರಿಸಿ ಅಮೆರಿಕಾದ ಹಿಂಡೆನ್‌ಬರ್ಗ್‌ ರಿಸರ್ಚ್‌ ಸಂಸ್ಥೆ ಕಳೆದ ವಾರ ಹೊರತಂದ ಅಧ್ಯಯನ ವರದಿಯ ಬೆನ್ನಲ್ಲೇ ಕುಸಿತ ಕಂಡಿದ್ದ ಅದಾನಿ ಸಮೂಹ ಸಂಸ್ಥೆಗಳ ಷೇರುಗಳ ಮೌಲ್ಯ ಇಂದು ಕೂಡ ಕುಸಿತವನ್ನು ಮುಂದುವರಿಸಿದ ಪರಿಣಾಮ ಗೌತಮ್‌ ಅದಾನಿ ನೇತೃತ್ವದ ಕಂಪೆನಿಗಳು ಇಲ್ಲಿಯ ತನಕ ಒಟ್ಟು 84 ಬಿಲಿಯನ್‌ ಡಾಲರ್‌ ನಷ್ಟ ಅನುಭವಿಸಿರುವುದರ ಜೊತೆಗೆ ಅದಾನಿ ಅವರು ಏಷ್ಯಾದ ಶ್ರೀಮಂತ ವ್ಯಕ್ತಿ ಸ್ಥಾನವನ್ನು ಕಳೆದುಕೊಳ್ಳುವುದರ ಜೊತೆಗೆ ಫೋರ್ಬ್ಸ್‌ ಶ್ರೀಮಂತರ ಪಟ್ಟಿಯಲ್ಲಿ 15ನೇ ಸ್ಥಾನಕ್ಕೆ ಕುಸಿದಿದ್ದಾರೆ.

ಈಗ ಅವರ ಒಟ್ಟು ಸಂಪತ್ತಿನ ಮೌಲ್ಯ 76.8 ಬಿಲಿಯನ್‌ ಡಾಲರ್‌ ಎಂದು ಅಂದಾಜಿಸಲಾಗಿದೆ. ರಿಲಯನ್ಸ್‌ ಇಂಡಸ್ಟ್ರೀಸ್‌ ಅಧ್ಯಕ್ಷ ಮುಕೇಶ್‌ ಅಂಬಾನಿ ಅವರಿಗಿಂತಲೂ ಅದಾನಿ ಕೆಳಗೆ ಸರಿದಿದ್ದು, ಅಂಬಾನಿ ಸಂಪತ್ತು ಮೌಲ್ಯ 83.6 ಬಿಲಿಯನ್‌ ಡಾಲರ್‌ ಆಗಿದೆ.

ಹಿಂಡೆನ್‌ಬರ್ಗ್‌ ವರದಿಗೆ ಅದಾನಿ ಸಮೂಹ ಸೃಷ್ಟೀಕರಣ ನೀಡಿ ತನ್ನ ವಿರುದ್ಧದ ಆರೋಪಗಳನ್ನು ನಿರಾಕರಿಸಿದೆಯಾದರೂ ಷೇರುದಾರರ ಸಂಶಯ ಮಾತ್ರ ನಿವಾರಣೆಯಾಗದೇ ಇರುವುದು ಅದಾನಿ ಸಮೂಹದ ಸಂಸ್ಥೆಗಳ ಷೇರುಗಳ ಮೌಲ್ಯ ಕುಸಿಯುತ್ತಿರುವುದರಿಂದ ಸ್ಪಷ್ಟವಾಗಿದೆ.

ಇಂದು ಅದಾನಿ ಎಂಟರ್‌ಪ್ರೈಸಸ್‌ ಷೇರು ಮೌಲ್ಯ ಶೇ. 30ರಷ್ಟು ಕುಸಿತ ಕಂಡರೆ, ಅದಾನಿ ಪವರ್‌ ಶೇ 3, ಅದಾನಿ ಟೋಟಲ್‌ ಗ್ಯಾಸ್‌ ಶೇ. 10 ರಷ್ಟು ಕುಸಿತ ಕಂಡಿದೆ. ಅದಾನಿ ಟ್ರಾನ್ಸ್‌ಮಿಷನ್‌ ಷೇರು ಮೌಲ್ಯ ಇಂದು ಶೇ 6 ರಷ್ಟು ಕುಸಿದರೆ ಅದಾನಿ ಪೋರ್ಟ್ಸ್‌ ಮತ್ತು ಸ್ಪೆಷಲ್‌ ಇಕನಾಮಿಕ್‌ ಝೋನ್‌ ಷೇರು ಮೌಲ್ಯ ಶೇ. 20ರಷ್ಟು ಕುಸಿತ ಕಂಡಿದೆ.

Similar News