ಒಡಿಶಾ ಸಚಿವ ನಬಾದಾಸ್‌ ಹತ್ಯೆ ಪ್ರಕರಣ: ಇಬ್ಬರು ಅಧಿಕಾರಿಗಳ ಅಮಾನತು

Update: 2023-02-01 14:18 GMT

ಭುವನೇಶ್ವರ: ಒಡಿಶಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ನಬಾ ಕಿಶೋರ್ ದಾಸ್ ಅವರು ಸಹಾಯಕ ಸಬ್ ಇನ್ಸ್‌ಪೆಕ್ಟರ್ ಒಬ್ಬರಿಂದ ಹತ್ಯೆಯಾದ ಎರಡು ದಿನಗಳ ನಂತರ ಝಾರ್ಸುಗುಡ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಜೈನ್ ಹಾಗೂ ಬ್ರಜ್ರಾಜ್‌ನಗರ ಉಪ ಪೊಲೀಸ್ ವರಿಷ್ಠಾಧಿಕಾರಿ ಗುಪ್ತೇಶ್ವರ್ ಭೋಯಿಯನ್ನು ಅಮಾನತುಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಇಬ್ಬರೂ ಪೊಲೀಸ್ ಮುಖ್ಯ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎಂದು indianexpress.com ವರದಿ ಮಾಡಿದೆ.

ಝಾರ್ಸುಗುಂಡ್ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ರಾಹುಲ್ ಜೈನ್ ಹುದ್ದೆಗೆ ಬರ್ಗಢ್ ಪೊಲೀಸ್ ವರಿಷ್ಠಾಧಿಕಾರಿ ಸ್ಮಿತ್ ಪರಾಮರ್ ಅವರನ್ನು ನೇಮಿಸಲಾಗಿದ್ದರೆ, ಭೋಯಿ ಹುದ್ದೆಗೆ ಚಿಂತಾಮಣಿ ಪ್ರಧಾನ್ ಅವರನ್ನು ನೇಮಿಸಲಾಗಿದೆ.

ಸಚಿವರ ಹತ್ಯೆಯ ಕುರಿತು ತನಿಖೆ ನಡೆಸುತ್ತಿರುವ ಅಪರಾಧ ವಿಭಾಗವು, ಹತ್ಯೆಯ ಕಾರಣವನ್ನು ಇನ್ನಷ್ಟೇ ಪತ್ತೆ ಹಚ್ಚಬೇಕಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಆರೋಪಿ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಗೋಪಾಲ್ ದಾಸ್ ಹಲವಾರು ದಿನಗಳಿಂದಲೇ ಸಚಿವರ ಹತ್ಯೆಗೆ ಯೋಜಿಸಿರುವಂತಿದೆ ಎಂದು ಶಂಕಿಸಿದ್ದಾರೆ.

"ಹತ್ಯೆಯು ಹಲವಾರು ದಿನಗಳಿಂದ ಪೂರ್ವನಿಯೋಜಿತವಾಗಿರುವಂತಿದೆ. ಆದರೆ, ನಾವಿನ್ನೂ ಹತ್ಯೆಯ ಕಾರಣ ಹಾಗೂ ಈ ಸಂಚಿನಲ್ಲಿ ಭಾಗಿಯಾಗಿರುವವರನ್ನು ಪತ್ತೆ ಹಚ್ಚಬೇಕಿದೆ. ವಾಸ್ತವಗಳನ್ನು ಹೊರತೆಗೆಯಲು ನಾವು ಹಲವಾರು ಆಯಾಮಗಳಿಂದ ಪರಿಶೀಲಿಸುತ್ತಿದ್ದೇವೆ" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು The Indian Express ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಇದಕ್ಕೂ ಮುನ್ನ ಆರೋಪಿಯು ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ ಎಂದು ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಅರುಣ್ ಬೋತ್ರಾ ತಿಳಿಸಿದ್ದರು.ಆರೋಪಿ ಗೋಪಾಲ್ ದಾಸ್ ವಿರುದ್ಧ ಮೊದಲಿಗೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 307(ಹತ್ಯಾ ಪ್ರಯತ್ನ) ಅಡಿ ಪ್ರಕರಣ ದಾಖಲಿಸಲಾಗಿತ್ತಾದರೂ, ನಂತರ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302(ಹತ್ಯೆ) ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Similar News