ಕೇಂದ್ರ ಬಜೆಟ್‌ನಲ್ಲಿ ರೈಲ್ವೆ ಇಲಾಖೆಗೆ ಭರ್ಜರಿ ಕೊಡುಗೆ

Update: 2023-02-01 14:31 GMT

ಹೊಸ ದಿಲ್ಲಿ: ರೈಲ್ವೆ ಇಲಾಖೆಗೆ ಈವರೆಗಿನ ಅತ್ಯಧಿಕ ಮೊತ್ತವಾದ ರೂ. 2.40 ಲಕ್ಷ ಕೋಟಿ ಮೀಸಲಿರಿಸಲಾಗಿದೆ ಎಂದು ಬುಧವಾರ ಲೋಕಸಭೆಯಲ್ಲಿ 2023-24ರ ಬಜೆಟ್ ಮಂಡಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ಲೋಕಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಸಾಲಿನಲ್ಲಿ ರೈಲ್ವೆ ಇಲಾಖೆಗೆ ಮೀಸಲಿರಿಸಲಾಗಿರುವ ಹಣವು 2013-14ನೇ ಸಾಲಿಗೆ ಹೋಲಿಸಿದರೆ ಒಂಬತ್ತು ಪಟ್ಟು ಹೆಚ್ಚಾಗಿದೆ ಎಂದು ಹೇಳಿದ್ದಾರೆ.

ಮೊದಲ ಮೈಲಿಯಿಂದ ಕೊನೆಯ ಮೈಲಿಯವರೆಗೆ ಕಲ್ಲಿದ್ದಲು, ರಸಗೊಬ್ಬರ ಹಾಗೂ ಆಹಾರ ಧಾನ್ಯಗಳ ಸರಬರಾಜಿಗೆ ಸಂಪರ್ಕ ವ್ಯವಸ್ಥೆ ಕಲ್ಪಿಸುವುದನ್ನು ಆದ್ಯತೆಯ ಮೇರೆಗೆ ಕೈಗೆತ್ತಿಕೊಳ್ಳಲಾಗಿದ್ದು, ಅದಕ್ಕಾಗಿ ಖಾಸಗಿ ವಲಯಗಳ ರೂ. 15,000 ಕೋಟಿ ಸೇರಿದಂತೆ ಒಟ್ಟು ರೂ. 75,000 ಕೋಟಿ ಮೀಸಲಿರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ರೈಲ್ವೆ ಪ್ರಯಾಣಿಕರ ನಿರೀಕ್ಷೆ ಹೆಚ್ಚಾಗಿರುವುದನ್ನು ಗಮನದಲ್ಲಿಟ್ಟುಕೊಂಡು ರಾಜಧಾನಿ, ಶತಾಬ್ದಿ, ದುರೊಂತೊ, ಹಮ್ಸಫರ್ ಮತ್ತು ತೇಜಸ್ ರೈಲುಗಳ 1,000 ಬೋಗಿಗಳನ್ನು ಪುನರ್ ನವೀಕರಣ ಮಾಡಲು ಉದ್ದೇಶಿಸಲಾಗಿದೆ. ಈ ಬೋಗಿಗಳನ್ನು ಆಧುನಿಕ ಒಳ ನೋಟ ಹಾಗೂ ಪ್ರಯಾಣಿಕರಿಗೆ ಮತ್ತಷ್ಟು ಆರಾಮದಾಯಕವಾಗುವಂತೆ ಸುಧಾರಿಸಲಾಗುವುದು ಎಂದು ಹೇಳಿದ್ದಾರೆ.

ರೈಲ್ವೆ ಇಲಾಖೆಯು ಮತ್ತಷ್ಟು ಮಾರ್ಗಗಳಲ್ಲಿ ವಂದೇ ಭಾರತ್ ರೈಲುಗಳ ಸಂಚಾರ ಆರಂಭಿಸಲು ಉದ್ದೇಶಿಸಿರುವುದರಿಂದ, ರೈಲ್ವೆ ಹಳಿಗಳಿಗೆ ಮತ್ತಷ್ಟು ವೇಗ ತುಂಬಲು ಹಳೆಯ ಹಳಿಗಳನ್ನು ಬದಲಿಸಲು ಅನುಕೂಲವಾಗುವಂತೆ ಗಮನಾರ್ಹ ಅನುದಾನವನ್ನೂ ಒದಗಿಸಲಾಗಿದೆ. ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ಗುರಿ ಹೊಂದಿರುವ ರೈಲ್ವೆ ಇಲಾಖೆಯು ಇನ್ನೂ ನೂರು ನೀಳವಾದ ಬೋಗಿಗಳನ್ನು ಉತ್ಪಾದಿಸುವುದಾಗಿ ಪ್ರತಿಪಾದಿಸಿದೆ.

ಬಜೆಟ್‌ನಲ್ಲಿ 35 ಜಲಜನಕ ಚಾಲಿತ ರೈಲುಗಳು, ಬದಿಯಿಂದ ಪ್ರವೇಶಾವಕಾಶ ಹೊಂದಿರುವ 4,500 ನೂತನವಾಗಿ ವಿನ್ಯಾಸಗೊಳಿಸಿದ ವಾಹನ ಸಾಗಣೆ ಬೋಗಿಗಳು, 5,000 ಎಲ್‌ಎಚ್‌ಬಿ ಬೋಗಿಗಳು ಹಾಗೂ 58,000 ವ್ಯಾಗನ್‌ಗಳನ್ನು ತಯಾರಿಸುವುದಾಗಿ ಕೇಂದ್ರ ಸರ್ಕಾರ ಪ್ರತಿಪಾದಿಸಿದೆ.

2022-23ನೇ ಸಾಲಿನ ಬಜೆಟ್‌ನಲ್ಲಿ ರೈಲ್ವೆ ಇಲಾಖೆಗೆ ರೂ. 1.4 ಲಕ್ಷ ಕೋಟಿ ಮೊತ್ತ ಮೀಸಲಿರಿಸಲಾಗಿತ್ತು. ಈ ಪೈಕಿ 1.37 ಲಕ್ಷ ಕೋಟಿ ಮೊತ್ತವನ್ನು ಹೂಡಿಕೆ ವೆಚ್ಚಕ್ಕಾಗಿ ಮೀಸಲಿಟ್ಟರೆ, ರೂ. 3,267 ಕೋಟಿ ಮೊತ್ತವನ್ನು ಆದಾಯ ವೆಚ್ಚಕ್ಕಾಗಿ ಮೀಸಲಿಡಲಾಗಿತ್ತು.

Similar News