ಇನ್ನು ಮುಂದೆ ವ್ಯವಹಾರಗಳಲ್ಲಿ ಸಾಮಾನ್ಯ ಗುರುತು ಚೀಟಿಯಾಗಿ ಪಾನ್ ಬಳಕೆ

Update: 2023-02-01 14:49 GMT

ಹೊಸದಿಲ್ಲಿ,ಫೆ.1: ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ಬುಧವಾರ ಮಂಡಿಸಿದ 2023-24ನೇ ಸಾಲಿನ ಕೇಂದ್ರ ಮುಂಗಡಪತ್ರದಲ್ಲಿ ವ್ಯವಹಾರಗಳನ್ನು ಸುಲಭಗೊಳಿಸುವ ಪ್ರಮುಖ ಕ್ರಮವಾಗಿ ಪಾನ್ ಎಂದೇ ಜನಪ್ರಿಯವಾಗಿ ಕರೆಯಲ್ಪಡುವ 10 ಅಂಕಿಗಳ ಕಾಯಂ ಖಾತೆ ಸಂಖ್ಯೆಯನ್ನು ಇನ್ನು ಮುಂದೆ ವ್ಯವಹಾರಗಳಿಗಾಗಿ ಸಾಮಾನ್ಯ ಗುರುತು ಚೀಟಿಯಾಗಿ ಬಳಸಲಾಗುವುದು ಎಂದು ಪ್ರಕಟಿಸಿದರು.

ಆದಾಯ ತೆರಿಗೆ ಇಲಾಖೆಯು ಪಾನ್ ಕಾರ್ಡ್‌ನ್ನು ವ್ಯಕ್ತಿ,ಸಂಸ್ಥೆ ಅಥವಾ ಕಂಪನಿಗೆ ನೀಡುತ್ತದೆ. ವಿವಿಧ ಸರಕಾರಿ ಏಜೆನ್ಸಿಗಳಿಗೆ ಒಂದೇ ಮಾಹಿತಿಯನ್ನು ಪ್ರತ್ಯೇಕವಾಗಿ ಸಲ್ಲಿಸುವ ಅಗತ್ಯ ಕುರಿತಂತೆ ಸೀತಾರಾಮನ್, ‘ಏಕೀಕೃತ ಫೈಲಿಂಗ್ ವ್ಯವಸ್ಥೆ’ಯನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದರು.

ಸಾಮಾನ್ಯ ಪೋರ್ಟಲ್‌ವೊಂದರಲ್ಲಿ ಸರಳೀಕೃತ ನಮೂನೆಗಳಲ್ಲಿ ಮಾಹಿತಿ ಅಥವಾ ರಿಟರ್ನ್‌ನ ಇಂತಹ ಸಲ್ಲಿಕೆಯನ್ನು ಸಲ್ಲಿಸಿದವರ ಆಯ್ಕೆಯ ಮೇರೆಗೆ ಅದನ್ನು ಇತರ ಏಜೆನ್ಸಿಗಳೊಂದಿಗೆ ಹಂಚಿಕೊಳ್ಳಲಾಗುವುದು ಎಂದರು.

ವ್ಯವಹಾರ ಸುಗಮತೆಯನ್ನು ಹೆಚ್ಚಿಸಲು 39,000ಕ್ಕೂ ಅಧಿಕ ಅನುಸರಣೆಗಳನ್ನು ಕಡಿಮೆ ಮಾಡಲಾಗಿದೆ ಮತ್ತು 3,400ಕ್ಕೂ ಅಧಿಕ ಕಾನೂನು ನಿಬಂಧನೆಗಳನ್ನು ನಿರಪರಾಧೀಕರಿಸಲಾಗಿದೆ ಎಂದು ಸತತ ಐದನೇ ಬಾರಿಗೆ ಮುಂಗಡಪತ್ರವನ್ನು ಮಂಡಿಸಿದ ಸೀತಾರಾಮನ್ ತಿಳಿಸಿದರು.

ಸರಕಾರವು ರಾಷ್ಟ್ರೀಯ ಡಾಟಾ ನೀತಿಯನ್ನು ತರಲಿದ್ದು,ಇದು ವೈಯಕ್ತಿಕ ಡಾಟಾವನ್ನು ಅನಾಮಧೇಯಗೊಳಿಸುವ ಜೊತೆಗೆ ಕೆವೈಸಿ ಪ್ರಕ್ರಿಯೆಯನ್ನು ಸರಳಗೊಳಿಸಲಿದೆ ಎಂದರು.

ಕಿರು,ಸಣ್ಣ ಮತ್ತು ಮಧ್ಯಮ ಉದ್ಯಮ (ಎಂಎಸ್‌ಎಂಇ)ಗಳು ಒಪ್ಪಂದಗಳನ್ನು ಕಾರ್ಯಗತಗೊಳಿಸುವಲ್ಲಿ ವಿಫಲಗೊಂಡರೆ ವಿವಾದ ಸೇ ವಿಶ್ವಾಸ್ ಯೋಜನೆಯ ಭಾಗವಾಗಿ ಕಾರ್ಯಕ್ಷಮತೆ ಠೇವಣಿಯ ಶೇ.95ರಷ್ಟನ್ನು ಸಣ್ಣ ಉದ್ಯಮಗಳಿಗೆ ಮರಳಿಸಲಾಗುವುದು ಎಂದು ವಿತ್ತಸಚಿವೆ ತಿಳಿಸಿದರು.

ಶೇ.100ರಷ್ಟು ವಿವಾದಿತ ತೆರಿಗೆ ಮತ್ತು ಶೇ.25ರಷ್ಟು ವಿವಾದಿತ ದಂಡ ಅಥವಾ ಬಡ್ಡಿ ಅಥವಾ ಶುಲ್ಕವನ್ನು ಪಾವತಿಸಿದರೆ ತೆರಿಗೆ ನಿರ್ಧಾರ ಅಥವಾ ಮರುನಿರ್ಧಾರಕ್ಕೆ ಸಂಬಂಧಿಸಿದಂತೆ ವಿವಾದಿತ ತೆರಿಗೆ,ಬಡ್ಡಿ,ದಂಡ ಅಥವಾ ಶುಲ್ಕಗಳನ್ನು ಇತ್ಯರ್ಥಗೊಳಿಸಲು ವಿವಾದ ಸೇ ವಿಶ್ವಾಸ್ ಅವಕಾಶವನ್ನು ಕಲ್ಪಿಸುತ್ತದೆ.ಇ-ನ್ಯಾಯಾಲಯಗಳ ಮೂರನೇ ಹಂತಕ್ಕೆ ಚಾಲನೆ ನೀಡಲಾಗುವುದು ಎಂದೂ ಸೀತಾರಾಮನ್ ತಿಳಿಸಿದರು.

Similar News