'ದಿಲ್ಲಿ ಗಲಭೆ ಕುರಿತು ವರದಿ ಮಾಡದಂತೆ ಎನ್ಜಿಒ, ಪಟ್ಟಭದ್ರ ಹಿತಾಸಕ್ತಿಗಳನ್ನು ನಿರ್ಬಂಧಿಸಿ'

ದಿಲ್ಲಿ ಹೈಕೋರ್ಟ್‌ಗೆ ಕೇಂದ್ರ ಆಗ್ರಹ

Update: 2023-02-01 15:34 GMT

ಹೊಸದಿಲ್ಲಿ, ಫೆ. 1: ಕೇಂದ್ರ ಸರಕಾರ ಬುಧವಾರ 2020ರ ದಿಲ್ಲಿ ಗಲಭೆ ಕುರಿತ ಸರಕಾರೇತರ ಸಂಸ್ಥೆಗಳ ಹಾಗೂ ಇತರ ಪಟ್ಟಭದ್ರ ಹಿತಾಸಕ್ತಿಗಳ ತನಿಖಾ ವರದಿಗೆ ಆಕ್ಷೇಪ ವ್ಯಕ್ತಪಡಿಸಿದೆ ಹಾಗೂ ಅವರು ನ್ಯಾಯದ ಹಾದಿಗೆ ಅಡ್ಡಿ ಪಡಿಸುತ್ತಾರೆ ಎಂದು ಉಚ್ಚ ನ್ಯಾಯಾಲಯಕ್ಕೆ ತಿಳಿಸಿದೆ. ಹಿಂಸಾಚಾರದ ಕುರಿತ ಹಲವು ವರದಿಗಳನ್ನು ರದ್ದುಗೊಳಿಸುವಂತೆ ಕೋರಿ ಧರ್ಮೇಶ್ ಶರ್ಮಾ ಎಂಬವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ಬೆಂಬಲಿಸಿ ಕೇಂದ್ರ ಸರಕಾರ ಸೆಪ್ಟಂಬರ್ 16ರಂದು ಅಫಿಡಾವಿಟ್ ಸಲ್ಲಿಸಿತ್ತು. 

ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ನೇತೃತ್ವದ ದಿಲ್ಲಿ ಉಚ್ಚ ನ್ಯಾಯಾಲಯದ ಪೀಠ ಈ ಪ್ರಕರಣವನ್ನು ನ್ಯಾಯಮೂರ್ತಿ ಸಿದ್ಧಾರ್ಥ ಮೃದುಲ್ ನೇತೃತ್ವದ ಪೀಠಕ್ಕೆ ಮಂಗಳವಾರ ವರ್ಗಾಯಿಸಿತ್ತು. 

ಶರ್ಮಾ ಅವರು ತನ್ನ ಅರ್ಜಿಯಲ್ಲಿ ದಿಲ್ಲಿ ಅಲ್ಪಸಂಖ್ಯಾತರ ಆಯೋಗ, ಅಮ್ನೆಸ್ಟಿ ಇಂಟರ್ನ್ಯಾಷನಲ್, ಹ್ಯೂಮನ್ ರೈಟ್ಸ್ ವಾಚ್, ಸಿಟಿಝನ್ ಆ್ಯಂಡ್ ಲಾಯರ್ಸ್ ಇನಿಷಿಯೇಟಿವ್ ಹಾಗೂ ಕಾನ್ಸ್ಟಿಟ್ಯೂಷನಲ್ ಕಾಂಡೆಕ್ಟ್ ಗ್ರೂಪ್ನ ವರದಿಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹಿಂಸಾಚಾರದ ಕುರಿತು ಯಾವುದೇ ಶತ್ಯ ಶೋಧನ ವರದಿಗಳನ್ನು ಪ್ರಸ್ತುತಪಡಿಸದಂತೆ ಖಾಸಗಿ, ಹೆಚ್ಚುವರಿ ನ್ಯಾಯಾಧಿಕರಣಗಳು ನಿರ್ಬಂಧಿಸಬೇಕು ಎಂದು ಕೇಂದ್ರ ಸರಕಾರ ಅಫಿಡಾವಿಟ್‌ನಲ್ಲಿ ನ್ಯಾಯಾಲಯಕ್ಕೆ ತಿಳಿಸಿದೆ. ಹೆಚ್ಚಿನ ವರದಿಗಳಲ್ಲಿ ಅಪರಾಧ ಪ್ರಕರಣದ ನಿಜವಾದ ಆರೋಪಿಗಳನ್ನು ಸಂತ್ರಸ್ತರೆಂದು ಹಾಗೂ ನಿಜವಾದ ಸಂತ್ರಸ್ತರನ್ನು ಆರೋಪಿಗಳೆಂದು ಬಿಂಬಿಸಲಾಗಿದೆ ಎಂದು ಕೇಂದ್ರ ಸರಕಾರ ಅಫಿಡಾವಿಟ್‌ನಲ್ಲಿ ಪ್ರತಿಪಾದಿಸಿದೆ. 

Similar News