ಅಭಿವೃದ್ಧಿ ಹೊಂದಿದ ಭಾರತಕ್ಕೆ ಅಡಿಗಲ್ಲು ಹಾಕಿದ ‘ಅಮೃತಕಾಲ’ದ ಮೊದಲ ಬಜೆಟ್: ಪ್ರಧಾನಿ ಮೋದಿ

Update: 2023-02-01 17:56 GMT

ಹೊಸದಿಲ್ಲಿ, ಫೆ. 1: ‘‘ಅಮೃತಕಾಲ’’ದ ಮೊದಲ ಬಜೆಟ್, ಸಮಾಜದ ಶೋಷಿತ ವರ್ಗಗಳಿಗೆ ಆದ್ಯತೆ ನೀಡುವುದರ ಜೊತೆಗೆ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವ ನಮ್ಮ ಸಂಕಲ್ಪಕ್ಕೆ ಅಡಿಗಲ್ಲು ಹಾಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಹೇಳಿದ್ದಾರೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ಗೆ ತನ್ನ ಮೊದಲ ಪ್ರತಿಕ್ರಿಯೆ ನೀಡಿದ ಮೋದಿ, ಈ ಬಜೆಟ್ ಕನಸು ಕಾಣುವ ಸಮಾಜ, ರೈತರು ಮತ್ತು ಮಧ್ಯಮ ವರ್ಗದ ಜನರ ಕನಸುಗಳನ್ನು ಈಡೇರಿಸುತ್ತದೆ ಎಂದು ಹೇಳಿದರು.

‘‘ಸಮೃದ್ಧ ಹಾಗೂ ಅಭಿವೃದ್ಧಿ ಹೊಂದಿದ ಭಾರತದ ಕನಸುಗಳನ್ನು ಸಾಕಾರಗೊಳಿಸುವ ದೊಡ್ಡ ಶಕ್ತಿ ಮಧ್ಯಮ ವರ್ಗ. ಅದಕ್ಕೆ (ಮಧ್ಯಮ ವರ್ಗ) ಶಕ್ತಿ ತುಂಬಲು ಸರಕಾರ ಹಲವು ನಿರ್ಧಾರಗಳನ್ನು ತೆಗೆದುಕೊಂಡಿದೆ’’ ಎಂದು ಪ್ರಧಾನಿ ನುಡಿದರು.

ಡಿಜಿಟಲ್ ಹಣ ಪಾವತಿ ಕ್ಷೇತ್ರದಲ್ಲಿ ನಾವು ಸಾಧಿಸಿರುವ ಯಶಸ್ಸನ್ನು ಕೃಷಿ ಕ್ಷೇತ್ರದಲ್ಲೂ ಸಾಧಿಸಬೇಕಾಗಿದೆ ಎಂದು ಹೇಳಿದ ಅವರು, ಕೃಷಿ ಕ್ಷೇತ್ರದಲ್ಲಿ ಡಿಜಿಟಲ್ ಮೂಲಸೌಕರ್ಯವನ್ನು ಒದಗಿಸಲು ಯೋಜನೆಯೊಂದನ್ನು ತರಲಾಗಿದೆ ಎಂದರು. ಅದು ಸಹಕಾರಿ ಸಂಘಗಳನ್ನು ಗ್ರಾಮೀಣ ಆರ್ಥಿಕತೆಯ ಅಭಿವೃದ್ಧಿಯ ಸೂತ್ರಧಾರನಾಗಿಸಲಿದೆ ಎಂದು ಅವರು ಅಭಿಪ್ರಾಯಪಟ್ಟರು.

‘‘ಮೂಲಸೌಕರ್ಯ ಅಭಿವೃದ್ಧಿಗಾಗಿ ಅಗಾಧ 10 ಲಕ್ಷ ಕೋಟಿ ರೂಪಾಯಿಯನ್ನು ಹೂಡಿಕೆ ಮಾಡಲಾಗುತ್ತಿದ್ದು, ಅಭಿವೃದ್ಧಿಗೆ ವೇಗ ಮತ್ತು ಹೊಸ ಶಕ್ತಿಯನ್ನು ತುಂಬಲಿದೆ’’ ಎಂದು ಪ್ರಧಾನಿ ಹೇಳಿದರು.

Similar News