​ಪೆಟ್ರೋಲ್,ಡೀಸೆಲ್ ಬೆಲೆಯೇರಿಕೆಯನ್ನು ತಡೆಹಿಡಿದಿದ್ದ ತೈಲ ಕಂಪನಿಗಳಿಗೆ 30,000 ಕೋ.ರೂ.ಸಬ್ಸಿಡಿ

Update: 2023-02-01 18:32 GMT

ಹೊಸದಿಲ್ಲಿ,ಫೆ.1: ಸರಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಹಣದುಬ್ಬರವನ್ನು ನಿಯಂತ್ರಿಸುವಲ್ಲಿ ಸರಕಾರಕ್ಕೆ ನೆರವಾಗುವ ಪ್ರಯತ್ನವಾಗಿ ವೆಚ್ಚಗಳು ಹೆಚ್ಚಾಗಿದ್ದರೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯೇರಿಕೆಯನ್ನು ತಡೆಹಿಡಿದ ಪರಿಣಾಮ ಅವುಗಳಿಗೆ ಉಂಟಾಗಿದ್ದ ಬೃಹತ್ ನಷ್ಟವನ್ನು ಸರಿದೂಗಿಸಲು 30,000 ಕೋ.ರೂ.ಗಳನ್ನು ಪಾವತಿಸುವುದನ್ನು 2023-24ನೇ ಸಾಲಿನ ಕೇಂದ್ರ ಮುಂಗಡಪತ್ರದಲ್ಲಿ ಪ್ರಸ್ತಾವಿಸಲಾಗಿದೆ.

ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು‘ತೈಲ ಮಾರಾಟ ಕಂಪನಿಗಳಿಗೆ ಬಂಡವಾಳ ಬೆಂಬಲ ’ಶೀರ್ಷಿಕೆಯಡಿ 30,000 ಕೋ.ರೂ.ಗಳನ್ನು ಹಂಚಿಕೆ ಮಾಡಿದ್ದಾರೆ. ಶ್ರೀಮಂತ ‘ಬ್ಲೂ ಚಿಪ್’ ಸಂಸ್ಥೆಗಳಾಗಿರುವ ಈ ಕಂಪನಿಗಳಿಗೆ ಬಂಡವಾಳ ಬೆಂಬಲದ ಅಗತ್ಯವೇನು ಎನ್ನುವುದಕ್ಕೆ ಮುಂಗಡಪತ್ರವು ಯಾವುದೇ ವಿವರಣೆಯನ್ನು ನೀಡಿಲ್ಲ.

2022 ಎಪ್ರಿಲ್ನಲ್ಲಿ ಪ್ರತಿ ಬ್ಯಾರೆಲ್ಗೆ 102.97 ಡಾ.ಗಳಿದ್ದ ಜಾಗತಿಕ ಕಚ್ಚಾ ತೈಲಗಳ ಬೆಲೆ ಜೂನ್ನಲ್ಲಿ 116.01 ಡಾ.ಗಳಿಗೆ ಏರಿಕೆಯಾಗಿದ್ದರೂ 2022,ಎ.6ರಿಂದ ಐಒಸಿ,ಬಿಪಿಸಿಎಲ್ ಮತ್ತು ಎಚ್ಪಿಸಿಎಲ್ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಬದಲಾವಣೆಗಳನ್ನು ಮಾಡಿರಲಿಲ್ಲ. ಇನ್ಪುಟ್ ವೆಚ್ಚಗಳು ಚಿಲ್ಲರೆ ಮಾರಾಟ ಬೆಲೆಗಿಂತ ಹೆಚ್ಚಾಗಿದ್ದಾಗಲೂ ಬೆಲೆಯೇರಿಕೆಯನ್ನು ತಡೆಹಿಡಿದಿದ್ದು ಈ ಮೂರು ಕಂಪನಿಗಳಿಗೆ ಅಗಾಧ ನಷ್ಟವನ್ನುಂಟು ಮಾಡಿತ್ತು.
ಬೆಲೆಯೇರಿಕೆಯ ಸ್ತಂಭನ 2022,ಜೂ.24ಕ್ಕೆ ಅಂತ್ಯಗೊಂಡ ವಾರಕ್ಕೆ ಈ ಕಂಪನಿಗಳಿಗೆ ಪ್ರತಿ ಲೀ.ಪೆಟ್ರೋಲ್ ಮೇಲೆ 17.4 ರೂ.ಮತ್ತು ಡೀಸೆಲ್ ಮೇಲೆ 27.7 ರೂ.ಗಳ ದಾಖಲೆಯ ನಷ್ಟಕ್ಕೆ ಕಾರಣವಾಗಿತ್ತು.

ಆದರೆ ನಂತರ ಜಾಗತಿಕ ಕಚ್ಚಾ ತೈಲಬೆಲೆಗಳು ಇಳಿದ ಪರಿಣಾಮ ತೈಲ ಕಂಪನಿಗಳು ಪೆಟ್ರೋಲ್ ಮೇಲಿನ ನಷ್ಟವನ್ನು ಸರಿದೂಗಿಸಿಕೊಂಡಿದ್ದವು ಮತ್ತು ಡೀಸೆಲ್ ಮೇಲಿನ ನಷ್ಟವು ಪ್ರತಿ ಲೀ.ಗೆ 10-11 ರೂ.ಗೆ ಬಂದು ನಿಂತಿತ್ತು. ಜಾಗತಿಕ ತೈಲ ಬೆಲೆಗಳು ಇಳಿಕೆಯಾಗಿದ್ದರೂ ಅದರ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಿರಲಿಲ್ಲ ಮತ್ತು ಇದು ತೈಲ ಕಂಪನಿಗಳು ಅನುಭವಿಸಿದ್ದ 50,000 ಕೋ.ರೂ.ಗಳ ಅಗಾಧ ನಷ್ಟವನ್ನು ಭಾಗಶಃ ತುಂಬಿಕೊಳ್ಳಲು ನೆರವಾಗಿತ್ತು.

Similar News