"BBC ಸಾಕ್ಷ್ಯಚಿತ್ರದ ಮೇಲಿನ ನಿರ್ಬಂಧ ವಾಪಸ್‌ ಪಡೆದು ಮಾಧ್ಯಮ ಸ್ವಾತಂತ್ರ್ಯ ರಕ್ಷಿಸಿ"

ಭಾರತಕ್ಕೆ ಅಮೆರಿಕಾದ ನ್ಯಾಷನಲ್‌ ಪ್ರೆಸ್‌ ಕ್ಲಬ್‌ ಆಗ್ರಹ

Update: 2023-02-02 08:21 GMT

ವಾಷಿಂಗ್ಟನ್: ಗುಜರಾತ್‌ನಲ್ಲಿ 2002 ರಲ್ಲಿ ನಡೆದ ಗಲಭೆಯಲ್ಲಿ ಆಗಿನ ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರ ಪಾತ್ರದ  ಕುರಿತ ಬಿಬಿಸಿಯ ವಿಶ್ಲೇಷಣಾತ್ಮಕ ಸಾಕ್ಷ್ಯಚಿತ್ರದ ಪ್ರಸಾರಕ್ಕೆ ತಡೆ ವಿಧಿಸಿದ ಭಾರತ ಸರ್ಕಾರದ ಕ್ರಮಕ್ಕೆ ಆಕ್ಷೇಪಿಸಿದ ಅಮೆರಿಕಾದ ನ್ಯಾಷನಲ್‌ ಪ್ರೆಸ್‌ ಕ್ಲಬ್‌ ಮತ್ತು ನ್ಯಾಷನಲ್‌ ಪ್ರೆಸ್‌ ಕ್ಲಬ್‌ ಜರ್ನಲಿಸಂ ಇನ್‌ಸ್ಟಿಟ್ಯೂಟ್‌, ಸರ್ಕಾರ ತನ್ನ ನಿರ್ಧಾರವನ್ನು ವಾಪಸ್‌ ಪಡೆಯಬೇಕು ಎಂದು ಆಗ್ರಹಿಸಿವೆ.

ಈ ಕುರಿತು ನ್ಯಾಷನಲ್‌ ಪ್ರೆಸ್‌ ಕ್ಲಬ್‌ ಅಧ್ಯಕ್ಷ ಈಲೀನ್‌ ಒʼರೀಲಿ ಮತ್ತು ಇನ್‌ಸ್ಟಿಟ್ಯೂಟ್‌ ಅಧ್ಯಕ್ಷ ಗಿಲ್‌ ಕ್ಲೀನ್‌ ಹೇಳಿಕೆ ಬಿಡುಗಡೆಗೊಳಿಸಿದ್ದಾರೆ.

"ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ಎಂಬುದಕ್ಕೆ ಭಾರತ ಹೆಮ್ಮೆಪಡಬೇಕಾಗಿದೆ. ಆದರೆ ಅದನ್ನೇ ನೆಚ್ಚಿಕೊಳ್ಳುತ್ತಾ ಮಾಧ್ಯಮ ಸ್ವಾತಂತ್ರ್ಯವನ್ನು ಹತ್ತಿಕ್ಕಲು, ಪತ್ರಕರ್ತರ ಮೇಲೆ ದೌರ್ಜನ್ಯವೆಸಗಲು ಹಾಗೂ  ಸರ್ಕಾರದ ಲೋಪಗಳನ್ನು ಎತ್ತಿ ತೋರಿಸುವ ಸುದ್ದಿಗಳನ್ನು ತಡೆಹಿಡಿಯುವುದನ್ನು ಮುಂದುವರಿಸಲು ಸಾಧ್ಯವಿಲ್ಲ. ಮೋದಿ ಅಧಿಕಾರಕ್ಕೆ ಬಂದಾಗಿನಿಂದ ಸ್ವತಂತ್ರ ಮತ್ತು ಮುಕ್ತ ಸುದ್ದಿ ಮಾಧ್ಯಮ ಹೊಂದುವ ನಾಗರಿಕರ ಹಕ್ಕನ್ನು ಆಗಾಗ ದಮನಿಸುತ್ತಿರುವುದನ್ನು ಹತಾಶೆ ಮತ್ತು ನಿರಾಶೆಯಿಂದ ನಾವು ಗಮನಿಸುತ್ತಿದ್ದೇವೆ," ಎಂದು ಅವರು ಬಿಡುಗಡೆಗೊಳಿಸಿದ ಹೇಳಿಕೆ ತಿಳಿಸಿದೆ.

"ಬಿಬಿಸಿ ಸಾಕ್ಷ್ಯಚಿತ್ರಕ್ಕೆ ವಿಧಿಸಿರುವ ನಿಷೇಧವನ್ನು ವಾಪಸ್‌ ಪಡೆಯಬೇಕು ಹಾಗೂ ಸಾಕ್ಷ್ಯಚಿತ್ರದ ಕುರಿತಂತೆ ಸಮ್ಮತಿ ಅಥವಾ ಅಸಮ್ಮತಿ ಸೂಚಿಸುವ ನಿರ್ಧಾರವನ್ನು ಸರ್ಕಾರ ಜನರಿಗೇ ಬಿಟ್ಟುಬಿಡಬೇಕು. ಬಿಬಿಸಿ ಜಗತ್ತಿನಲ್ಲಿಯೇ ಅತ್ಯಂತ ಗೌರವಾನ್ವಿತ ಸುದ್ದಿ ಸಂಸ್ಥೆಯಾಗಿದ್ದು ತನ್ನ ಅತ್ಯುನ್ನತ ಸಂಪಾದಕೀಯ ಮಾನದಂಡಗಳಿಗೆ ಹೆಸರು ಪಡೆದಿದೆ. ಸರಕಾರವು ತನ್ನ ದೇಶದ ಪತ್ರಕರ್ತರನ್ನು ಹಾಗೂ ಮಾಧ್ಯಮ ಸ್ವಾತಂತ್ರ್ಯವನ್ನು ದಮನಿಸುವುದನ್ನು ನಿಲ್ಲಿಸಬೇಕೆಂದು ನಾವು ಆಗ್ರಹಿಸುತ್ತೇವೆ," ಎಂದು ಹೇಳಿಕೆ ತಿಳಿಸಿದೆ.

ಇದನ್ನೂ ಓದಿ: ನಾನು ಜೈಲಿನಲ್ಲಿರುವುದರಿಂದ ಯಾರಿಗೆ ಲಾಭವಾಗಿದೆಯೋ ಗೊತ್ತಿಲ್ಲ,  ನನ್ನ ಹೋರಾಟ ಮುಂದುವರಿಸುವೆ: ಕಪ್ಪನ್

Similar News