ಮುಂಬೈನಲ್ಲಿ ದ್ವೇಷ ಭಾಷಣ ಕಾರ್ಯಕ್ರಮ ನಿಷೇಧಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ಅಸ್ತು

Update: 2023-02-02 09:36 GMT

ಹೊಸದಿಲ್ಲಿ: ಮುಂಬೈನಲ್ಲಿ ಫೆಬ್ರವರಿ 5 ರಂದು ನಡೆಯಲಿರುವ ದ್ವೇಷ ಭಾಷಣದ ಕಾರ್ಯಕ್ರಮವನ್ನು ನಿಷೇಧಿಸುವಂತೆ ಕೋರಿ ಸಲ್ಲಿಸಲಾದ ಮನವಿಯ ವಿಚಾರಣೆಗೆ ಸುಪ್ರೀಂ ಕೋರ್ಟ್ ಗುರುವಾರ ಒಪ್ಪಿಕೊಂಡಿದೆ.

ನ್ಯಾಯಮೂರ್ತಿ ಕೆ.ಎಂ. ಜೋಸೆಫ್, ನ್ಯಾಯಮೂರ್ತಿ ಅನಿರುದ್ಧ ಬೋಸ್ ಹಾಗೂ ನ್ಯಾಯಮೂರ್ತಿ ಹೃಷಿಕೇಶ್ ರಾಯ್ ಅವರ ಪೀಠವು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರಿಂದ ಸೂಚನೆಗಳನ್ನು ಪಡೆಯುವುದಾಗಿ ಹೇಳಿದೆ.

ಮುಂಬೈನಲ್ಲಿ ಹಿಂದೂ ಜನ ಆಕ್ರೋಶ ಮೋರ್ಚಾ ಆಯೋಜಿಸಲಿರುವ ದ್ವೇಷ ಭಾಷಣದ ರ್ಯಾಲಿಯ ವಿರುದ್ಧ ಸಲ್ಲಿಸಿರುವ ಈ ಅರ್ಜಿಯ ತುರ್ತು ವಿಚಾರಣೆಯ ಅಗತ್ಯವಿದೆ ಎಂದು ವಕೀಲರು ಪ್ರಸ್ತಾಪಿಸಿದ ನಂತರ ಪೀಠ ವಿಚಾರಣೆಗೆ ಒಪ್ಪಿಕೊಂಡಿದೆ.

ಕೆಲವು ದಿನಗಳ ಹಿಂದೆ ಇದೇ ರೀತಿಯ ರ್ಯಾಲಿಯನ್ನು ಆಯೋಜಿಸಲಾಗಿತ್ತು.  ಇದರಲ್ಲಿ 10,000 ಜನರು ಭಾಗವಹಿಸಿದ್ದರು . ಮುಸ್ಲಿಂ ಸಮುದಾಯಗಳನ್ನು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಬಹಿಷ್ಕರಿಸುವಂತೆ ಕರೆ ನೀಡಿದ್ದರು  ಎಂದು ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.

"ರಾಜ್ಯಕ್ಕೆ ಪ್ರತಿಯನ್ನು ಸಲ್ಲಿಸಿ, ನಾವು ಅದನ್ನು ನಾಳೆ ಸಿಜೆಐ ಆದೇಶಕ್ಕೆ ಒಳಪಟ್ಟು ಈ ಪ್ರಕರಣ ಮಾತ್ರ ಪಟ್ಟಿ ಮಾಡುತ್ತೇವೆ " ಎಂದು ಪೀಠ ಹೇಳಿದೆ.

Similar News