ಮಾರಕಾಸ್ತ್ರಗಳಿಂದ ದಾಳಿ ಪ್ರಕರಣಗಳಲ್ಲಿ ಏರಿಕೆ: ತಳವಾರು ಖರೀದಿಸುವವರಿಂದ ಆಧಾರ್‌ ಮಾಹಿತಿ ಪಡೆಯಲು ಸೂಚಿಸಿದ ಪೊಲೀಸರು!

Update: 2023-02-02 11:58 GMT

ಪುಣೆ: ಕಿಡಿಗೇಡಿಗಳು 'ಕೊಯ್ಟಾಗಳು' ಅಥವಾ ತಳವಾರುಗಳನ್ನು ಬಳಸಿ ಜನರನ್ನು ಭಯಭೀತಗೊಳಿಸಲು ಹಾಗೂ ದಾಳಿ ನಡೆಸಲು ಯತ್ನಿಸಿದ ಹಲವಾರು ಘಟನೆಗಳು ನಡೆದಿರುವ ಹಿನ್ನೆಲೆಯಲ್ಲಿ ಇಂತಹ ಘಟನೆಗಳು ಪುನರಾವರ್ತಿಸದಂತೆ ಪುಣೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ತಳವಾರು ಖರೀದಿದಾರರ ಆಧಾರ್‌ ಮಾಹಿತಿಗಳನ್ನು ಪಡೆದುಕೊಳ್ಳುವಂತೆ ಅವರು ಮಾರಾಟಗಾರರಿಗೆ ಸೂಚಿಸಿದ್ದಾರೆ.

ತಳವಾರು ಸಂಬಂಧಿತ ಅಪರಾಧಗಳನ್ನು ನಿಯಂತ್ರಿಸಲು ದಿನದ 24 ಗಂಟೆಗಳ ಕಾಲ ವಿವಿಧ ಭಾಗಗಳಲ್ಲಿ ಗಸ್ತು ತಿರುಗಲು ಪುಣೆ ಪೊಲೀಸ್‌ ಆಯುಕ್ತ ರೀತೇಶ್‌ ಕುಮಾರ್‌ ಇತ್ತೀಚೆಗೆ 450 ಬೀಟ್‌ ಮಾರ್ಷಲ್‌ಗಳನ್ನು ನೇಮಿಸಿದ್ದಾರೆ.

ಸಾಮಾನ್ಯವಾಗಿ ಕೃಷಿ ಉದ್ದೇಶಕ್ಕೆ ಅಥವಾ ತೆಂಗಿನಕಾಯಿ ಒಡೆಯಲು ಬಳಸಲಾಗುವ ಕತ್ತಿಗಳನ್ನು ದುರುದ್ದೇಶಕ್ಕಾಗಿ ಬಳಸುವುದನ್ನು ತಡೆಯಲು  ಖರೀದಿದಾರರ ವಿವರಗಳನ್ನು ಸಂಗ್ರಹಿಸಲಾಗುತ್ತಿದೆ. ಇತ್ತೀಚೆಗೆ ನಡೆದ ಉನ್ನತಾಧಿಕಾರಿಗಳ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ರಸ್ತೆಬದಿ ಮಾರಾಟಗಾರರು ಯಾವುದೇ ಪರವಾನಗಿಯಿಲ್ಲದೆ ಕತ್ತಿಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂಬ ದೂರುಗಳು ಇವೆ. ಈ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ನಡೆಸುತ್ತಿದ್ದು ಇತ್ತೀಚೆಗೆ 100ಕ್ಕೂ ಅಧಿಕ ಕೊಯ್ಟಾಗಳನ್ನು ವಶಪಡಿಸಿಕೊಂಡಿದ್ದಾರೆ.

ಕೊಯ್ಟಾ ಗ್ಯಾಂಗ್‌ ಸಂಬಂಧಿತ ಅಪರಾಧಗಳಲ್ಲಿ ಹಲವು ಅಪ್ರಾಪ್ತರು ಇದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಮಂಗಳವಾರ ನಗರದ ನೂತನ್‌ ಮರಾಠಿ ವಿದ್ಯಾಲಯದ ಸಮೀಪ ನಡೆದ ದಾಳಿಯಲ್ಲಿ 12ನೇ ತರಗತಿ ವಿದ್ಯಾರ್ಥಿಯೊಬ್ಬ ಗಾಯಗೊಂಡಿದ್ದ.

Similar News