ತಮಿಳುನಾಡಿನಲ್ಲಿ ಅಕಾಲಿಕ ಮಳೆ: ಹಲವೆಡೆ ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ

Update: 2023-02-02 12:30 GMT

ಚೆನ್ನೈ: ಬುಧವಾರ ರಾತ್ರಿ ತಮಿಳುನಾಡಿನಾದ್ಯಂತ ಅಕಾಲಿಕ ಮಳೆ ಸುರಿದಿದ್ದರಿಂದ, ಗುರುವಾರ ನಾಗಪಟ್ಟಿಣಂ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಈ ನಡುವೆ, ತಿರುವರ್ ಜಿಲ್ಲೆಯ ಶಾಲಾ, ಕಾಲೇಜುಗಳಿಗೂ ಗುರುವಾರ ರಜೆ ಘೋಷಿಸಲಾಗಿದೆ ಎಂದು indiatoday.in ವರದಿ ಮಾಡಿದೆ.

ಈ ಕುರಿತು ಬುಧವಾರ ಟ್ವಿಟರ್‌ನಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ಭಾರತೀಯ ಹವಾಮಾನ ಇಲಾಖೆಯು, ಶ್ರೀಲಂಕಾ ಕರಾವಳಿ ಪ್ರದೇಶದಿಂದ 80 ಕಿಮೀ ದೂರ ಹಾಗೂ ತಮಿಳುನಾಡಿನ ಕರೈಕಲ್‌ನಿಂದ  400 ಕಿಮೀ ದೂರವಿರುವ ನೈರುತ್ಯ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವುಂಟಾಗಿದೆ ಎಂದು ತಿಳಿಸಿದೆ.

ಗುರುವಾರ ಮುಂಜಾನೆ ಈ ಕುರಿತು ಹೆಚ್ಚುವರಿ ಮಾಹಿತಿ ನೀಡಿರುವ ಹವಾಮಾನ ಇಲಾಖೆಯು, ಬುಧವಾರ ರಾತ್ರಿ 11.30ರ ವೇಳೆ ಶ್ರೀಲಂಕಾದ ಈಶಾನ್ಯ ಬಟ್ಟಿಕಲೊದಿಂದ 60 ಕಿಮೀ ದೂರ ಹಾಗೂ ಭಾರತದ ಆಗ್ನೇಯ ಕರೈಕಲ್‌ನಿಂದ 400 ಕಿಮೀ ದೂರವಿರುವ ನೈರುತ್ಯ  ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿದೆ. ಈ ಮಾರುತಗಳು ಪಶ್ಚಿಮ-ನೈರುತ್ಯಾಭಿಮುಖವಾಗಿ ಚಲಿಸಲಿದ್ದು, ಬಟ್ಟಿಕಲೊ ಹಾಗೂ ಟ್ರಿಂಕೊಮಲೀ ನಡುವೆ ಶ್ರೀಲಂಕಾ ಕರಾವಳಿಯನ್ನು ಗುರುವಾರ ಮುಂಜಾನೆ ಹಾದು ಹೋಗಲಿವೆ ಎಂದು ಹೇಳಿದೆ.

ಚೆನ್ನೈನ ಪ್ರಾದೇಶಿಕ ಹವಾಮಾನ ಇಲಾಖೆಯು, "ಫೆಬ್ರವರಿ 2ರಂದು ವಾಯುಭಾರ ಕುಸಿತದ ಕಾರಣಕ್ಕೆ ದಕ್ಷಿಣ ತಮಿಳುನಾಡಿನ ಹಲವಾರು ಭಾಗದಲ್ಲಿ ಲಘುವಿನಿಂದ ಸಾಧಾರಣ ಮಳೆ ಹಾಗೂ ಉತ್ತರ ತಮಿಳುನಾಡಿನಲ್ಲಿ ಒಂದು ಅಥವಾ ಎರಡು ಪ್ರದೇಶಗಳಲ್ಲಿ ಮಳೆ ಸುರಿಯುವ ಸಾಧ್ಯತೆ ಇದೆ. ಹಾಗೆಯೇ ದಕ್ಷಿಣ ತಮಿಳುನಾಡಿನ ಒಂದೆರಡು ಪ್ರದೇಶಗಳಲ್ಲಿ ಗುರುವಾರ ಭಾರಿ ಮಳೆಯಾಗುವ ಸಾಧ್ಯತೆ ಇದೆ" ಎಂದು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಗುರುವಾರ ಮತ್ತು ಶುಕ್ರವಾರ ಸಮುದ್ರದ ಅಲೆಗಳು ರಭಸದಿಂದ ಅತಿ ರಭಸವಾಗಿರುವ ಸಾಧ್ಯತೆ ಇದೆ. ಈ ಸಂದರ್ಭದಲ್ಲಿ ಮೀನುಗಾರರು ಮೀನುಗಾರಿಕೆಗಾಗಿ ಸಮುದ್ರಕ್ಕಿಳಿಯಬಾರದು ಎಂದೂ ಪ್ರಕಟಣೆಯಲ್ಲಿ ಎಚ್ಚರಿಸಲಾಗಿದೆ.

Similar News