ಚುನಾವಣೆಗಳಲ್ಲಿ ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಿಂದ ಸ್ಪರ್ಧೆ ವಿರೋಧಿಸಿದ್ದ ಅರ್ಜಿಗೆ ಸುಪ್ರೀಂ ತಿರಸ್ಕಾರ

Update: 2023-02-02 14:16 GMT

ಹೊಸದಿಲ್ಲಿ,ಫೆ.2: ಚುನಾವಣೆಗಳಲ್ಲಿ ಅಭ್ಯರ್ಥಿಗಳು ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಿಂದ ಸ್ಪರ್ಧಿಸಲು ಅವಕಾಶ ಕಲ್ಪಿಸಿರುವ ಕಾನೂನನ್ನು ರದ್ದುಗೊಳಿಸುಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL)ಯನ್ನು ಸರ್ವೋಚ್ಚ ನ್ಯಾಯಾಲಯ(Supreme Court)ವು ಗುರುವಾರ ತಿರಸ್ಕರಿಸಿದೆ.

ಅರ್ಜಿದಾರರಾದ ಬಿಜೆಪಿ ನಾಯಕ ಅಶ್ವಿನಿ ಉಪಾಧ್ಯಾಯ(Ashwini Upadhyay) ಅವರು ಜನತಾ ಪ್ರಾತಿನಿಧ್ಯ ಕಾಯ್ದೆ,1951ರ ಕಲಂ 33(7)ರ ಸಾಂವಿಧಾನಿಕತೆಯನ್ನು ಪ್ರಶ್ನಿಸಿದ್ದರು.

ಅಭ್ಯರ್ಥಿಗಳು ಎರಡೂ ಕ್ಷೇತ್ರಗಳಲ್ಲಿ ಗೆದ್ದರೆ ಒಂದನ್ನು ತೆರವುಗೊಳಿಸಬೇಕಾಗುತ್ತದೆ ಎಂದು ತನ್ನ ಅರ್ಜಿಯಲ್ಲಿ ಬೆಟ್ಟು ಮಾಡಿದ್ದ ಉಪಾಧ್ಯಾಯ,ಹೀಗೆ ತೆರವಾದ ಕ್ಷೇತ್ರದಲ್ಲಿ ಉಪಚುನಾವಣೆಯನ್ನು ನಡೆಸುವುದು ಸಾರ್ವಜನಿಕ ಬೊಕ್ಕಸ,ಸರಕಾರದ ಮಾನವಶಕ್ತಿ ಮತ್ತು ಇತರ ಸಂಪನ್ಮೂಲಗಳ ಮೇಲೆ ತಪ್ಪಿಸಲಾಗದ ಆರ್ಥಿಕ ಹೊರೆಯನ್ನುಂಟು ಮಾಡುತ್ತದೆ. ಅಲ್ಲದೆ ಇದು ಕ್ಷೇತ್ರದ ಮತದಾರರಿಗೂ ಅನ್ಯಾಯವಾಗುತ್ತದೆ ಎಂದು ವಾದಿಸಿದ್ದರು.

ಆದರೆ ಇದು ಶಾಸಕಾಂಗಕ್ಕೆ ಸಂಬಂಧಪಟ್ಟ ವಿಷಯವೆಂದು ಹೇಳಿ ಅರ್ಜಿಯನ್ನು ವಜಾಗೊಳಿಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್(D.Y. Chandrachud) ನೇತೃತ್ವದ ಪೀಠವು,ಅಭ್ಯರ್ಥಿಗಳು ವಿವಿಧ ಕಾರಣಗಳಿಂದಾಗಿ ಬೇರೆ ಬೇರೆ ಕ್ಷೇತ್ರಗಳಿಂದ ಸ್ಪರ್ಧಿಸಬಹುದು. ಇದು ಪ್ರಜಾಪ್ರಭುತ್ವವನ್ನು ವಿಸ್ತರಿಸುತ್ತದೆಯೇ ಎನ್ನುವುದು ಸಂಸತ್ತಿಗೆ ಬಿಟ್ಟ ವಿಷಯವಾಗಿದೆ ಎಂದು ಹೇಳಿತು.

ಓರ್ವ ಅಭ್ಯರ್ಥಿ ಒಂದಕ್ಕಿಂತ ಹೆಚ್ಚಿನ ಕ್ಷೇತ್ರಗಳಿಂದ ಸ್ಪರ್ಧಿಸುವುದನ್ನು ನಿಷೇಧಿಸಲು ಭಾರತೀಯ ಕಾನೂನು ಆಯೋಗವೂ ಶಿಫಾರಸು ಮಾಡಿತ್ತು ಎಂದು ಉಪಾಧ್ಯಾಯ ಪರ ಹಿರಿಯ ವಕೀಲ ಗೋಪಾಲ ಶಂಕರನಾರಾಯಣ(Gopal Sankaranarayanan) ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠವು,ಕ್ರಮವನ್ನು ತೆಗೆದುಕೊಳ್ಳುವುದು ಸಂಸತ್ತಿನ ವಿಶಿಷ್ಟಾಧಿಕಾರವಾಗಿದೆ ಮತ್ತು ನ್ಯಾಯಾಂಗ ಹಸ್ತಕ್ಷೇಪ ಅಗತ್ಯವಿಲ್ಲ ಎಂದು ಹೇಳಿತು.

ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ(Narendra Modi) ಮತ್ತು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ(Rahul Gandhi) ಸೇರಿದಂತೆ ಅನೇಕ ನಾಯಕರು ಎರಡು ಕ್ಷೇತ್ರಗಳಿಂದ ಸ್ಪರ್ಧಿಸಿದ್ದಾರೆ.

ಅಭ್ಯರ್ಥಿಗಳು ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಮೂಲಕ ರಾಷ್ಟ್ರಮಟ್ಟದ ನಾಯಕರಾಗಲು ಪ್ರಯತ್ನಿಸಬಹುದು ಎಂದು ಗುರುವಾರ ವಿಚಾರಣೆ ಸಂದರ್ಭದಲ್ಲಿ ಹೇಳಿದ ಮು.ನ್ಯಾ.ಚಂದ್ರಚೂಡ್ ಅವರು,ಇವೆಲ್ಲ ರಾಜಕೀಯ ನಿರ್ಧಾರಗಳಾಗಿವೆ ಮತ್ತು ಅಂತಿಮವಾಗಿ ಮತದಾರರು ನಿರ್ಧರಿಸುತ್ತಾರೆ ಎಂದರು.

Similar News