ಜಮ್ಮು: ಹಲವು ಸ್ಫೋಟ ಪ್ರಕರಣ; ಲಷ್ಕರೆ ತಯ್ಯಿಬದ ಶಂಕಿತ ಉಗ್ರನ ಬಂಧನ

Update: 2023-02-02 14:25 GMT

ಜಮ್ಮು, ಫೆ. 2: ವೈಷ್ಣೋದೇವಿ(Vaishno Devi) ಯಾತ್ರಾರ್ಥಿಗಳು ಪ್ರಯಾಣಿಸುತ್ತಿದ್ದ ಬಸ್ಸಿನಲ್ಲಿ ಸ್ಫೋಟ ಸೇರಿದಂತೆ ಹಲವು ಸ್ಫೋಟಗಳನ್ನು ನಡೆಸಿದ ಆರೋಪದಲ್ಲಿ ಲಷ್ಕರೆ ತಯ್ಯಿಬ(Tayyib)ದ ಉಗ್ರನೆಂದು ಶಂಕಿಸಲಾದ ಸರಕಾರಿ ಶಾಲೆಯ ಶಿಕ್ಷಕರೋರ್ವರನ್ನು ಬಂಧಿಸಲಾಗಿದೆ ಎಂದು ಜಮ್ಮು ಹಾಗೂ ಕಾಶ್ಮೀರದ ಡಿಜಿಪಿ ದಿಲ್ಬಾಗ್ ಸಿಂಗ್(Dilbagh Singh) ಅವರು ಗುರುವಾರ ಹೇಳಿದ್ದಾರೆ.

ಜಮ್ಮುವಿನ ನರ್ವಾಲ್  ನಲ್ಲಿ  ಇತ್ತೀಚೆಗೆ ಸಂಭವಿಸಿದ ಅವಳಿ ಸ್ಫೋಟ ಪ್ರಕರಣದ ತನಿಖೆ ಹಿನ್ನೆಲೆಯಲ್ಲಿ ರಿಯಾಸಿ ಜಿಲ್ಲೆಯ ನಿವಾಸಿ ಆರಿಫ್(arif) ನನ್ನು ಬಂಧಿಸಲಾಗಿದೆ. ಸುಗಂಧ ದ್ರವ್ಯದ ಬಾಟಲಿಯಲ್ಲಿ ಅಳವಡಿಸಲಾಗಿದ್ದ ಸುಧಾರಿತ ಸ್ಫೋಟಕ ಸಾಧನ (IED)ವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಿಂಗ್ ತಿಳಿಸಿದ್ದಾರೆ. ಕೇಂದ್ರಾಡಳಿತ ಪ್ರದೇಶದಲ್ಲಿ ಈ ಮಾದರಿಯ ಬಾಂಬ್ ಪತ್ತೆಯಾಗುತ್ತಿರುವುದು ಇದೇ ಮೊದಲು ಎಂದು ಅವರು ಹೇಳಿದ್ದಾರೆ.

ಆರಿಫ್ ಪಾಕಿಸ್ತಾನಿ ಹ್ಯಾಂಡ್ಲರ್ ನ ಅಪ್ಪಣೆಯಂತೆ ಕೆಲಸ ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ. ನಾಲ್ವರು ಸಾವನ್ನಪ್ಪಿದ ಹಾಗೂ 24 ಮಂದಿ ಗಾಯಗೊಳ್ಳಲು ಕಾರಣವಾದ ವೈಷ್ಣೋದೇವಿಗೆ ಯಾತ್ರಾರ್ಥಿಗಳು ಸಂಚರಿಸುತ್ತಿದ್ದ ಬಸ್ನಲ್ಲಿ ಕಳೆದ ಮೇಯಲ್ಲಿ ಬಾಂಬ್ ಇರಿಸಿದ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ ಎಂದು ಸಿಂಗ್ ತಿಳಿಸಿದ್ದಾರೆ.

9 ಜನರು ಗಾಯಗೊಳ್ಳಲು ಕಾರಣವಾದ ಜನವರಿ 21ರಂದು ನರ್ವಾಲ್ನಲ್ಲಿ ಸಂಭವಿಸಿದ ಅವಳಿ ಸ್ಫೋಟವಲ್ಲದೆ, 2022 ಫೆಬ್ರವರಿಯಲ್ಲಿ ಜಮ್ಮುವಿನ ಶಾಸ್ತ್ರಿ ನಗರ ಪ್ರದೇಶದಲ್ಲಿ ಐಇಡಿ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿರುವುದನ್ನು ಕೂಡ ಆತ ಒಪ್ಪಿಕೊಂಡಿದ್ದಾನೆ ಎಂದು ಅವರು ಹೇಳಿದ್ದಾರೆ.

Similar News