ನ್ಯಾಯಾಂಗದ ವಿರುದ್ಧ ಹೇಳಿಕೆ: ಉಪರಾಷ್ಟ್ರಪತಿ, ಕಾನೂನು ಸಚಿವರ ವಿರುದ್ಧ ಬಾಂಬೆ ಹೈಕೋರ್ಟ್ ನಲ್ಲಿ ಪಿಐಎಲ್
ಮುಂಬೈ,ಫೆ.2: ಕೊಲಿಜಿಯಂ,ನ್ಯಾಯಾಂಗ ಮತ್ತು ಸರ್ವೋಚ್ಚ ನ್ಯಾಯಾಲಯದ ವಿರುದ್ಧ ನೀಡಿರುವ ಹೇಳಿಕೆಗಳಿಗಾಗಿ ಉಪರಾಷ್ಟ್ರಪತಿ ಜಗದೀಪ ಧನಕರ್(Jagdeep Dhankhar) ಮತ್ತು ಕೇಂದ್ರ ಕಾನೂನು ಸಚಿವ ಕಿರಣ ರಿಜಿಜು(Kiren Rijiju) ಅವರ ವಿರುದ್ಧ ಕ್ರಮವನ್ನು ಕೋರಿ ಬಾಂಬೆ ವಕೀಲರ ಸಂಘವು ಬಾಂಬೆ ಉಚ್ಚ ನ್ಯಾಯಾಲಯ(Bombay High Court)ದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL)ಯನ್ನು ಸಲ್ಲಿಸಿದೆ.
ಧನಕರ್ ಮತ್ತು ರಿಜಿಜು ಅವರ ನಡವಳಿಕೆ ಸಾರ್ವಜನಿಕವಾಗಿ ಸರ್ವೋಚ್ಚ ನ್ಯಾಯಾಲಯದ ಪ್ರತಿಷ್ಠೆಯನ್ನು ತಗ್ಗಿಸಿದೆ ಎಂದು ವಕೀಲರ ಸಂಘವು ತನ್ನ ಅರ್ಜಿಯಲ್ಲಿ ಹೇಳಿದೆ.ಅತ್ಯಂತ ಅವಮಾನಕಾರಿ ಮತ್ತು ಅವಹೇಳನಕಾರಿ ಭಾಷೆಯಲ್ಲಿ ನ್ಯಾಯಾಂಗದ ವಿರುದ್ಧ ನೇರ ದಾಳಿಯನ್ನು ಆರಂಭಿಸಲಾಗಿದೆ ಎಂದು ತನ್ನ ಅರ್ಜಿಯಲ್ಲಿ ಹೇಳಿರುವ ವಕೀಲರ ಸಂಘವು, ಉಪರಾಷ್ಟ್ರಪತಿ ಮತ್ತು ಕಾನೂನು ಸಚಿವರು ಕೊಲಿಜಿಯಂ ವ್ಯವಸ್ಥೆ ಮತ್ತು ಸಂವಿಧಾನದ ಮೂಲ ರಚನೆ ಸಿದ್ಧಾಂತದ ವಿರುದ್ಧ ಸಾರ್ವಜನಿಕ ವೇದಿಕೆಯಲ್ಲಿ ಬಹಿರಂಗವಾಗಿ ದಾಳಿಗಳನ್ನು ನಡೆಸುತ್ತಿದ್ದಾರೆ.
ಸಾಂವಿಧಾನಿಕ ಹುದ್ದೆಗಳಲ್ಲಿರುವ ಪ್ರತಿವಾದಿಗಳ (ಧನಕರ್ ಮತ್ತು ರಿಜಿಜು) ಇಂತಹ ಅನುಚಿತ ವರ್ತನೆಯು ಸಾರ್ವಜನಿಕರ ದೃಷ್ಟಿಯಲ್ಲಿ ಸರ್ವೋಚ್ಚ ನ್ಯಾಯಾಲಯದ ಘನತೆಯನ್ನು ತಗ್ಗಿಸುತ್ತಿದೆ ಎಂದು ತಿಳಿಸಿದೆ.ಸಂವಿಧಾನದಲ್ಲಿ ನಂಬಿಕೆಯ ಕೊರತೆಯನ್ನು ವ್ಯಕ್ತಪಡಿಸುವ ಮೂಲಕ ಧನಕರ್ ಮತ್ತು ರಿಜಿಜು ಯಾವುದೇ ಸಾಂವಿಧಾನಿಕ ಹುದ್ದೆಯಲ್ಲಿ ಮುಂದುವರಿಯುವ ಅರ್ಹತೆಯನ್ನು ಸ್ವಯಂ ಕಳೆದುಕೊಂಡಿದ್ದಾರೆ ಎಂದು ವಕೀಲರ ಸಂಘವು ತನ್ನ ಅರ್ಜಿಯಲ್ಲಿ ವಾದಿಸಿದೆ.
ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇನ್ನೂ ವಿಚಾರಣೆಗೆ ಪಟ್ಟಿ ಮಾಡಲಾಗಿಲ್ಲ.