ನಾನು ಮನಸ್ಸು ಮಾಡಿದರೆ ತಕ್ಷಣ ಉಕ್ರೇನ್-ರಶ್ಯ ಯುದ್ಧ ಅಂತ್ಯವಾಗುತ್ತದೆ: ಡೊನಾಲ್ಡ್ ಟ್ರಂಪ್‌

Update: 2023-02-02 16:27 GMT

ವಾಷಿಂಗ್ಟನ್, ಫೆ.2: ನಾನು ಒಂದು ವೇಳೆ ಅಮೆರಿಕದ ಅಧ್ಯಕ್ಷ ಹುದ್ದೆಯಲ್ಲಿದ್ದರೆ ರಶ್ಯ-ಉಕ್ರೇನ್ ಯುದ್ಧವೇ ನಡೆಯುತ್ತಿರಲಿಲ್ಲ. ಈಗ ಅಷ್ಟೇ ಅಲ್ಲ, ಮುಂದಿನ ದಶಲಕ್ಷ ವರ್ಷದವರೆಗೂ ಯುದ್ಧ ನಡೆಯುತ್ತಿರಲಿಲ್ಲ’ ಎಂದು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

 ಈಗಲೂ ಮನಸ್ಸು ಮಾಡಿದರೆ ಈ ಭಯಾನಕ ಮತ್ತು ವೇಗವಾಗಿ ಉಲ್ಬಣಗೊಳ್ಳುತ್ತಿರುವ ಯುದ್ಧವನ್ನು 24 ಗಂಟೆಯೊಳಗೆ ಅಂತ್ಯಗೊಳಿಸಲು ಸಂಧಾನ ನಡೆಸುತ್ತಿದ್ದೆ ಎಂದು ಟ್ರಂಪ್ ತನ್ನ ವಕ್ತಾರರ ಟ್ವಿಟರ್ ಖಾತೆಯಲ್ಲಿ ಹೇಳಿಕೆಯ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಉಕ್ರೇನ್ಗೆ ಅಮೆರಿಕನ್ ನಿರ್ಮಿತ ಅಬ್ರಾಮ್ಸ್ ಟ್ಯಾಂಕ್ಗಳನ್ನು ರವಾನಿಸುವ ಅಧ್ಯಕ್ಷ ಜೋ ಬೈಡನ್ ನಿರ್ಧಾರವನ್ನು ಖಂಡಿಸಿದ ಟ್ರಂಪ್, ಈ ನಡೆಯನ್ನು ಪ್ರಚೋದನೆ ಎಂದು ರಶ್ಯ ಪರಿಗಣಿಸುವ ಅಪಾಯವಿದೆ ಎಂದಿದ್ದಾರೆ. ‘ಮೊದಲು ಟ್ಯಾಂಕ್ಗಳು, ಬಳಿಕ ಪರಮಾಣು ಅಸ್ತ್ರಗಳು. ಇದೀಗ ಈ ಹುಚ್ಚು ಯುದ್ಧಕ್ಕೆ ಅಂತ್ಯಹಾಡಬೇಕಿದೆ. ಇದು ಸಾಧ್ಯ ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ. 

ಉಕ್ರೇನ್ ಸಂಘರ್ಷ ಅಂತ್ಯಕ್ಕೆ ನಾವು ಬಯಸಿದ್ದೆವು: ರಶ್ಯ 

ಉಕ್ರೇನ್ ಸಂಘರ್ಷ ಅಂತ್ಯಗೊಳ್ಳಬೇಕೆಂದು ನಾವು ಬಯಸಿದ್ದೆವು. ಆದರೆ ಇದೀಗ ಪಾಶ್ಚಿಮಾತ್ಯ ದೇಶಗಳು ದೀರ್ಘಶ್ರೇಣಿಯ ಅತ್ಯಾಧುನಿಕ ಕ್ಷಿಪಣಿಗಳನ್ನು ಉಕ್ರೇನ್ಗೆ ಪೂರೈಸಿದ್ದರಿಂದ ನಮ್ಮ ನಿಲುವನ್ನು ಬದಲಾಯಿಸಬೇಕಿದೆ ಎಂದು ರಶ್ಯದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೋವ್ ಗುರುವಾರ ಹೇಳಿದ್ದಾರೆ.

ಇದೀಗ ಗಡಿಭಾಗದಲ್ಲಿ ಭದ್ರತಾ ವಲಯ ನಿರ್ಮಾಣವಾಗಬೇಕಿದ್ದರೆ, ಅಲ್ಲಿರುವ ಉಕ್ರೇನ್ ಪಡೆಗಳನ್ನು ಇನ್ನಷ್ಟು ದೂರ ಹಿಮ್ಮೆಟ್ಟಿಸುವ ಅನಿವಾರ್ಯತೆಯಿದೆ ಎಂದು ಲಾವ್ರೋವ್ ಹೇಳಿದ್ದಾರೆ. ಯುದ್ಧ ಮುಕ್ತಾಯದ ಬಗ್ಗೆ ನಡೆಯುವ ಸಂಧಾನ ಮಾತುಕತೆಯಲ್ಲಿ ಪಾಲ್ಗೊಳ್ಳಲು ರಶ್ಯಕ್ಕೆ ಆಸಕ್ತಿಯಿಲ್ಲ ಎಂದು ಪಾಶ್ಚಿಮಾತ್ಯರು ಸುಳ್ಳು ಸುದ್ಧಿ ಹರಡುವ ಮೂಲಕ ಮೋಲ್ದೋವ, ಜಾರ್ಜಿಯಾ ಹಾಗೂ ಮಧ್ಯ ಏಶ್ಯಾದಲ್ಲಿರುವ ಈ ಹಿಂದಿನ ಸೋವಿಯತ್ ಒಕ್ಕೂಟದ ಸದಸ್ಯರನ್ನು ರಶ್ಯದ ವಿರುದ್ಧ ಎತ್ತಿಕಟ್ಟುತ್ತಿದ್ದಾರೆ ಎಂದು ಲಾವ್ರೋವ್ ಆರೋಪಿಸಿದ್ದಾರೆ.

Similar News