ಅಮೆರಿಕ ಆಗಸದಲ್ಲಿ ಚೀನಾದ ಬೇಹುಗಾರಿಕೆ ಬಲೂನ್ ಪತ್ತೆ!

Update: 2023-02-03 02:32 GMT

ವಾಷಿಂಗ್ಟನ್: ತೀರಾ ಸೂಕ್ಷ್ಮ ಎನಿಸಿದ ಅಣ್ವಸ್ತ್ರ ಸ್ಥಳಗಳ ಸರ್ವೇಕ್ಷಣೆ ನಡೆಸುತ್ತಿದೆ ಎನ್ನಲಾದ ಚೀನಾದ ಬೇಹುಗಾರಿಕೆ ಬಲೂನ್ ಅಮೆರಿಕದ ಆಗಸದಲ್ಲಿ ಹಾರುತ್ತಿರುವುದನ್ನು ಪತ್ತೆ ಹಚ್ಚಲಾಗಿದೆ ಎಂದು ಪೆಂಟಾಗನ್ ಪ್ರಕಟಿಸಿದೆ.

ಈ ಬೇಹುಗಾರಿಕೆ ಬಲೂನ್ ಮೇಲೆ ನಿಗಾ ಇಡಲಾಗಿದೆ. ಇದನ್ನು ಹೊಡೆದು ಉರುಳಿಸುವ ಸಾಧ್ಯತೆಯನ್ನು ಪರಿಗಣಿಸಲಾಗಿತ್ತದರೂ, ಇದು ನೆಲಮಟ್ಟದಲ್ಲಿ ಹಲವು ಮಂದಿಯ ಜೀವಕ್ಕೆ ಅಪಾಯ ತಂದೊಡ್ಡುವ ಸಾಧ್ಯತೆ ಇದ್ದ ಕಾರಣ ಇದನ್ನು ಕಾರ್ಯಗತಗೊಳಿಸಲಿಲ್ಲ ಎಂದು ಅಮೆರಿಕದ ರಕ್ಷಣಾ ಅಧಿಕಾರಿಗಳು ಎಎಫ್‌ಪಿಗೆ ತಿಳಿಸಿದ್ದಾರೆ.

ಅಮೆರಿಕದ ವಾಯವ್ಯ ಭಾಗದಲ್ಲಿ, ತೀರಾ ಸೂಕ್ಷ್ಮ ವಾಯುನೆಲೆ ಹಾಗೂ ಆಯಕಟ್ಟಿನ ಕ್ಷಿಪಣಿಗಳು ಇದ್ದ ಸ್ಥಳದಲ್ಲಿ ಈ ಬಲೂನ್ ಹಾರಾಡುತಿತ್ತು ಎಂದು ಅಧಿಕಾರಿಗಳ ಹೇಳಿಕೆಯನ್ನು ಉಲ್ಲೇಖಿಸಿ ಎಎಫ್‌ಪಿ ವರದಿ ಮಾಡಿದೆ.

"ನಿಶ್ಚಿತವಾಗಿಯೂ ಈ ಬಲೂನ್‌ನ ಉದ್ದೇಶ ಸರ್ವೇಕ್ಷಣೆ. ಆದರೆ ಇದರ ಪ್ರಸ್ತುತ ಮಾರ್ಗ ಹಲವು ಸೂಕ್ಷ್ಮ ಪ್ರದೇಶಗಳನ್ನು ಒಳಗೊಂಡಿದೆ. ಆದರೆ ಗುಪ್ತಚರ ಮಾಹಿತಿ ಸಂಗ್ರಹದ ದೃಷ್ಟಿಕೋನದಿಂದ ಈ ಬಲೂನ್ ಸೀಮಿತ ಸಂಯೋಜನೆ ಹೊಂದಿದ್ದಾಗಿ ಅಂದಾಜಿಸಲಾಗಿದೆ" ಎಂದು ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ಬಲೂನ್ ಕೆಲ ದಿನಗಳ ಹಿಂದೆ ಅಮೆರಿಕದ ವಾಯುಪ್ರದೇಶವನ್ನು ಪ್ರವೇಶಿಸಿದೆ. ಮೊಂಟಾನದಲ್ಲಿ ಯುದ್ಧವಿಮಾನಗಳು ಈ ಬಲೂನನ್ನು ಪರಿಶೀಲಿಸಿವೆ. ಈ ಬಗ್ಗೆ ಉನ್ನತ ಮಿಲಿಟರಿ ಅಧಿಕಾರಿಗಳ ಮಟ್ಟದಲ್ಲಿ ಚರ್ಚೆ ನಡೆದಿದೆ ಎಂದು ತಿಳಿದುಬಂದಿದೆ.

Similar News