ಯೆಮನ್‌: ಕೇರಳ ಮೂಲದ ನರ್ಸ್‌ಗೆ ಮರಣ ದಂಡನೆ ಪ್ರಕರಣ; ಕೂಡಲೇ ನೆರವು ಒದಗಿಸಲು ಮೊರೆ ಇಟ್ಟ ತಾಯಿ

Update: 2023-02-03 09:34 GMT

ಸನಾ: ಕಳೆದ ಆರು ವರ್ಷಗಳ ಹಿಂದೆ ಯೆಮೆನ್ ಪ್ರಜೆಯೊಬ್ಬನ ಕೊಲೆ ಪ್ರಕರಣದಲ್ಲಿ ಮರಣ ದಂಡನೆಗೆ ಗುರಿಯಾಗಿರುವ ಕೇರಳ ಮೂಲದ ಶುಶ್ರೂಷಕಿ ನಿಮಿಷಾ ಪ್ರಿಯಾ ಅವರಿಗೆ ವಿಧಿಸಿರುವ ಶಿಕ್ಷೆಯನ್ನು ಜಾರಿಗೊಳಿಸಬೇಕೆಂದು ಸಂತ್ರಸ್ತನ ಕುಟುಂಬದ ಸದಸ್ಯರು ಯೆಮೆನ್ ಸುಪ್ರೀಂಕೋರ್ಟ್ ಮೊರೆ ಹೋಗಿದ್ದು, ಸಮಯ ಮೀರುತ್ತಿರುವುದರಿಂದ ಕೂಡಲೇ ನೆರವು ಒದಗಿಸಬೇಕು ಎಂದು ಆರೋಪಿ ನಿಮಿಷಾ ಪ್ರಿಯಾ ಅವರ ತಾಯಿ ಪ್ರೇಮಾ ಕುಮಾರಿ ಮೊರೆ ಇಟ್ಟಿದ್ದಾರೆ.

ಈ ಕುರಿತು ಪಾಲಕ್ಕಾಡ್‌ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿರುವ ಅವರು, "ಜೈಲಿನಿಂದ ಕರೆ ಮಾಡಿದ್ದ ನನ್ನ ಪುತ್ರಿ ನಿಮಿಷಾ ಪ್ರಿಯಾ, ಸಮಯ ಕೈಮೀರಿ ಹೋಗುತ್ತಿದೆ ಎಂದು ತಿಳಿಸಿದಳು. ನನಗೆ ನನ್ನ ಮಗಳ ಪ್ರಾಣವನ್ನು ಹೇಗಾದರೂ ಉಳಿಸಲೇಬೇಕಿದೆ. ಅದಕ್ಕಾಗಿ ಹಲವಾರು ಪ್ರಯತ್ನಗಳನ್ನು ಮಾಡಿದರೂ ಯಾವುದೇ ಉಪಯೋಗವಾಗಿಲ್ಲ. ಶಿಕ್ಷೆಯನ್ನು ತ್ವರಿತವಾಗಿ ಜಾರಿಗೊಳಿಸಲು ವಾದಿ, ಪ್ರತಿವಾದಿಗಳಿಬ್ಬರಿಗೂ ಅರ್ಜಿ ಸಲ್ಲಿಸುವಂತೆ ಸುಪ್ರೀಂಕೋರ್ಟ್ ಸೂಚಿಸಿದೆ ಎಂದು ಆಕೆ ನನಗೆ ತಿಳಿಸಿದಳು" ಎಂದು ಹೇಳಿದ್ದಾರೆ.

ಈ ಬಗೆಯ ಪ್ರಕರಣಗಳಲ್ಲಿರುವ ಸಮಸ್ಯೆಗಳ ಕುರಿತು ಪ್ರಸ್ತಾಪಿಸಿದ ಅವರು, "ನನ್ನ ಮಗಳು ಸಾಧ್ಯತೆ ವಿರುದ್ಧದ ಸಾಧ್ಯತೆಯನ್ನು ಆಶಿಸುತ್ತಿದ್ದಾಳೆ. ನಾನು ಯೆಮೆನ್‌ಗೆ ತೆರಳಿ ಸಂತ್ರಸ್ತ ಕುಟುಂಬದ ಕ್ಷಮಾಪಣೆ ಕೇಳಲು ಬಯಸುತ್ತಿದ್ದೇನೆ. ಇದಕ್ಕಾಗಿ ಕೆಲವರು ಪರಿಹಾರದ ಹಣ ಸಂಗ್ರಹಿಸಿದ್ದಾರೆ ಎಂದು ಕೇಳಿದ್ದೆ. ಆದರೆ, ನಂತರ ಏನಾಯಿತು ಎಂದು ನನಗೆ ತಿಳಿಯಲಿಲ್ಲ" ಎಂದು ತಿಳಿಸಿದ್ದಾರೆ.

ಕಳೆದ ವರ್ಷದ ಮೇ ತಿಂಗಳಲ್ಲಿ ನಿಮಿಷಾ ಪ್ರಿಯಾಳ ಜೀವ ಉಳಿಸಲು ಸಾಧ್ಯವಿರುವ ಎಲ್ಲ ಮಾರ್ಗಗಳನ್ನೂ ಶೋಧಿಸುವುದಾಗಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌. ಜೈಶಂಕರ್ ಕೂಡಾ ಭರವಸೆ ನೀಡಿದ್ದರು. ಇದರೊಂದಿಗೆ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಜೋಸೆಫ್ ಕುರಿಯನ್ ಕೂಡಾ ಪ್ರಿಯಾ ಪರವಾಗಿ ಬೆಂಬಲ ವ್ಯಕ್ತಪಡಿಸಿದ್ದರು.

ಚಿಲ್ಲರೆ ಮಾರಾಟ ವಲಯದ ದೈತ್ಯ ಸಂಸ್ಥೆ ಲುಲು ಸಮೂಹದ ಅಧ್ಯಕ್ಷ ಎಂ.ಎ. ಯೂಸುಫ್ ಅಲಿ ಕೂಡಾ ಪ್ರಿಯಾಳ ಪ್ರಾಣ ಉಳಿಸಲು ಪರಿಹಾರ ಧನ ನೀಡಲು ಮುಂದಾಗಿದ್ದರು. ಆದರೆ, ಸಂತ್ರಸ್ತನ ಕುಟುಂಬದ ಸದಸ್ಯರು ರೂ. 1.5 ಕೋಟಿ ಪರಿಹಾರ ಧನಕ್ಕೆ ಬೇಡಿಕೆ ಇಟ್ಟಿದ್ದರು.

ಆರಂಭದಲ್ಲಿ ಪರಿಹಾರ ಧನವನ್ನು ಪಡೆಯಲು ಒಪ್ಪಿಕೊಂಡಿದ್ದ ಸಂತ್ರಸ್ತನ ಕುಟುಂಬವು, ನಂತರ ತನ್ನ ನಿಲುವನ್ನು ಬದಲಿಸಿತು ಎಂದು ಶುಶ್ರೂಷಕಿ ನಿಮಿಷಾ ಪ್ರಿಯಾರ ಪ್ರಾಣ ಉಳಿಸಲು ರಚನೆಯಾಗಿರುವ ನಿಮಿಷಾ ಪ್ರಿಯಾ ಉಳಿಸಿ ಕಾರ್ಯಪಡೆಯು ಹೇಳಿದೆ.

2017ರಲ್ಲಿ ಯೆಮೆನ್ ಪ್ರಜೆ ತಲಾಲ್ ಅಬ್ದುಲ್ ಮಹದಿ ಎಂಬುವವರಿಗೆ ತನ್ನ ಸಹೋದ್ಯೋಗಿ ಹನಾನ್ ಜೊತೆಗೂಡಿ ಅರವಳಿಕೆ ನೀಡಿ ಕೊಂದ ಆರೋಪದಲ್ಲಿ ನಿಮಿಷಾ ಪ್ರಿಯಾ ದೋಷಿಯಾಗಿ ಹೊರಹೊಮ್ಮಿದ್ದು, ಅವರಿಗೆ ನ್ಯಾಯಾಲಯವು ಆರು ವರ್ಷಗಳ ಹಿಂದೆ ಮರಣ ದಂಡನೆ ಶಿಕ್ಷೆ ವಿಧಿಸಿತ್ತು.

Similar News