ಅಜ್ಜ-ಅಜ್ಜಿಯನ್ನು ಭೇಟಿ ಮಾಡಲು ಇಚ್ಛೆಯಿಲ್ಲದಿದ್ದರೆ...: ಮಕ್ಕಳ ಪರವಾಗಿ ತೀರ್ಪು ನೀಡಿದ ಇಟಲಿ ಕೋರ್ಟ್ ಹೇಳಿದ್ದೇನು?

Update: 2023-02-03 09:59 GMT

ರೋಮ್: ಒಂದು ವೇಳೆ ಮಕ್ಕಳು ತಮ್ಮ ಅಜ್ಜ-ಅಜ್ಜಿಯರನ್ನು ಭೇಟಿ ಮಾಡುವ ಇಚ್ಛೆ ಹೊಂದಿಲ್ಲದಿದ್ದರೆ, ಭೇಟಿ ಮಾಡುವ ಅಗತ್ಯವಿಲ್ಲ ಎಂದು ಇಟಲಿಯ ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿದೆ.

ತಮ್ಮ ಅಜ್ಜ-ಅಜ್ಜಿಯರೊಂದಿಗೆ ಮೊಮ್ಮಕ್ಕಳು ಸಮಯ ಕಳೆಯಬೇಕು ಎಂಬ ಕೆಳ ನ್ಯಾಯಾಲಯದ ತೀರ್ಪನ್ನು ವಿರೋಧಿಸಿ ಮಕ್ಕಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯವು ಮೇಲಿನಂತೆ ತೀರ್ಪು ನೀಡಿದೆ ಎಂದು ಎಂದು hindustantimes.com  ವರದಿ ಮಾಡಿದೆ.

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಅಜ್ಜ-ಅಜ್ಜಿಯರು ಹಾಗೂ ಚಿಕ್ಕಪ್ಪ, ಪೋಷಕರು ಅಡೆತಡೆ ಉಂಟು ಮಾಡುತ್ತಿರುವುದರಿಂದ ಮಕ್ಕಳನ್ನು ಭೇಟಿ ಮಾಡಲು ತೊಂದರೆಯಾಗುತ್ತಿದೆ ಎಂದು ಕೆಳ ನ್ಯಾಯಾಲಯದಲ್ಲಿ ದೂರು ಸಲ್ಲಿಸಿದ್ದರು. ಈ ಕುರಿತು ವಿಚಾರಣೆ ನಡೆಸಿದ್ದ ಬಾಲ ನ್ಯಾಯಾಲಯ ಮತ್ತು ಕೆಳ ನ್ಯಾಯಾಲಯವು ಸಾಮಾಜಿಕ ಕಾರ್ಯಕರ್ತರು ಎದುರು ಅವರು ಮಕ್ಕಳನ್ನು ಭೇಟಿ ಮಾಡಬಹುದು ಎಂದು ಅಜ್ಜ-ಅಜ್ಜಿಯರ ಪರ 2019ರಲ್ಲಿ ತೀರ್ಪು ನೀಡಿದ್ದವು. ಇದರೊಂದಿಗೆ ಮಕ್ಕಳು ತಮ್ಮ ಸಂಬಂಧಿಕರನ್ನು ಭೇಟಿ ಮಾಡದಿದ್ದರೆ ಮಾನಸಿಕ ತೊಂದರೆಗೊಳಗಾಗಬಹುದು ಎಂದೂ ಎಚ್ಚರಿಸಿದ್ದವು.

ಆದರೆ, ಕೌಟುಂಬಿಕ ಒತ್ತಡಗಳಿರುವುದರಿಂದ ಮಕ್ಕಳು ತಮ್ಮ ಅಜ್ಜ-ಅಜ್ಜಿಯರನ್ನು ಭೇಟಿ ಮಾಡಕೂಡದು ಎಂದು ಪೋಷಕರು ವಾದಿಸಿದ್ದರು. ಈ ಕುರಿತು ತೀರ್ಪು ನೀಡಿರುವ ಸರ್ವೋಚ್ಚ ನ್ಯಾಯಾಲಯವು, "ತಮ್ಮ ಹಿರಿಯ ತಲೆಮಾರಿನೊಂದಿಗೆ ಮಕ್ಕಳು ಸಂಪರ್ಕ ಹೊಂದಿರುವುದರಿಂದ ಲಾಭವಾಗುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ, ತೀವ್ರ ಕೌಟುಂಬಿಕ ಒತ್ತಡಗಳಿರುವಾಗ ಅವರನ್ನು ತಮ್ಮ ಅಜ್ಹ-ಅಜ್ಜಿಯರನ್ನು ಭೇಟಿ ಮಾಡುವಂತೆ ಬಲವಂತ ಮಾಡಲು ಸಾಧ್ಯವಿಲ್ಲ" ಎಂದು ಹೇಳಿದೆ.

ಇದರೊಂದಿಗೆ ಅಜ್ಜ-ಅಜ್ಜಿಯರಿಗಿಂತ ಮಕ್ಕಳ ಹಿತಾಸಕ್ತಿಯನ್ನು ಮುಂದುವರಿಸಿಕೊಂಡು ಹೋಗಬೇಕಿದೆ ಮತ್ತು ಬೇಡವಾದ ಹಾಗೂ ಅಸ್ವೀಕೃತ ಸಂಬಂಧಗಳನ್ನು ಮುಂದುವರಿಸುವಂತೆ ಒತ್ತಡ ಹೇರಲು ಸಾಧ್ಯವಿಲ್ಲ ಎಂದೂ ಸರ್ವೋಚ್ಚ ನ್ಯಾಯಾಲಯ ಸ್ಪಷ್ಟಪಡಿಸಿದೆ.

Similar News