ಉಡುಪಿ: ಹಿರಿಯ ನಾಗರಿಕರಿಗೆ ದೊರಕುವ ಸೌಲಭ್ಯಗಳ ಕುರಿತು ಮಾಹಿತಿ ಕಾರ್ಯಾಗಾರ

Update: 2023-02-03 16:38 GMT

ಉಡುಪಿ: ವೃದ್ಧಾಪ್ಯವು ಪ್ರಕೃತಿ ಸಹಜ ಪ್ರಕ್ರಿಯೆಯಾಗಿದ್ದು, ಹಿರಿಯ ನಾಗರಿಕರನ್ನು ಕಡೆಗಣಿಸದೇ ಅವರ ಸಂಧ್ಯಾಕಾಲದಲ್ಲಿ ಹೊಂದಾಣಿಕೆಯ ಜೀವನ ನಡೆಸುವುದು ಅತ್ಯವಶ್ಯಕವಾಗಿದೆ ಎಂದು ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದ ಯೋಜನಾ ಸಂಯೋಜಕಿ ಅಶ್ವಿನಿ ಹೇಳಿದ್ದಾರೆ.

ಅವರು ಇತ್ತೀಚೆಗೆ ಬಡಾನಿಡಿಯೂರು ಗ್ರಾಮ ಪಂಚಾಯತ್‌ನಲ್ಲಿ, ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಇವರ ವತಿಯಿಂದ ನಡೆದ ಅರಿವಿನ ಸಿಂಚನ ಕಾರ್ಯಕ್ರಮದಲ್ಲಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರಿಗೆ ಸರಕಾರದಿಂದ ದೊರಕುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿ ಮಾತನಾಡುತಿದ್ದರು.

ಹಿರಿಯ ನಾಗರಿಕರು ತುರ್ತು ಸಂದರ್ಭದಲ್ಲಿ ದೂರವಾಣಿ ಸಂಖ್ಯೆ: 0820 -2526394ಕ್ಕೆ ಕರೆ ಮಾಡಿ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು ಎಂದ ಅವರು ಹಿರಿಯರ ನಿರ್ವಹಣೆಯನ್ನು ಮಕ್ಕಳು, ವಾರಸುದಾರರು ಮಾಡದಿದ್ದಲ್ಲಿ ಎ.ಸಿ.ಕೋರ್ಟಿಗೆ ಅರ್ಜಿ ಸಲ್ಲಿಸಿ ನ್ಯಾಯ ಪಡೆಯಬಹುದು. ಹಿರಿಯ ನಾಗರಿಕರ ಗುರುತಿನ ಚೀಟಿ ಮತ್ತು ವೃದ್ಧಾಪ್ಯ ವೇತನಗಳು, ಕೇಂದ್ರ ಹಾಗೂ ರಾಜ್ಯ ಸರಕಾರಗಳ ಯೋಜನೆಗಳ ಸವಲತ್ತುಗಳನ್ನು ಹಿರಿಯ ನಾಗರಿಕರು ಪಡೆದುಕೊಳ್ಳುವಂತೆ ತಿಳಿಸಿದರು.

ಗ್ರಾಪಂ ಸದಸ್ಯೆ ಯಶೋಧ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಾಲತಿ, ಗ್ರಾಮಲೆಕ್ಕಿಗರಾದ ಪವಿತ್ರ,  ವಿಕಲಚೇತನರ ಸಬಲೀಕರಣ ಇಲಾಖೆಯ ತಾಲೂಕು ಸಂಯೋಜಕ ಮಧುಸೂಧನ ರಾವ್, ವಿಕಲಚೇತನ ಹಾಗೂ ಹಿರಿಯ ನಾಗರಿಕ ಫಲಾನುಭವಿಗಳು ಮತ್ತಿತರರು ಭಾಗವಹಿಸಿದ್ದರು. ಕಾರ್ಯದರ್ಶಿ ಗುರುರಾಜ್ ಸ್ವಾಗತಿಸಿ, ವಂದಿಸಿದರು.

Similar News