‘ ರಾಮಚರಿತ ಮಾನಸ’ ಟೀಕೆ: ಎಸ್ಪಿ ನಾಯಕ ಸ್ವಾಮಿ ಪ್ರಸಾದ್ ವೌರ್ಯ ವಿರುದ್ಧ ಎಫ್ಐಆರ್

Update: 2023-02-03 15:25 GMT

ಗ್ವಾಲಿಯರ್,ಫೆ.3: ಹಿಂದೂ ಪುರಾಣ ಗ್ರಂಥ ರಾಮಚರಿತ ಮಾನಸ(Ramcharitmanasa)ದ ವಿರುದ್ಧ ಆಕ್ಷೇಪಕಾರಿ ಹೇಳಿಕೆಗಳನ್ನು ನೀಡಿದ್ದ ಉತ್ತರಪ್ರದೇಶದ ಮಾಜಿ ಸಚಿವ ಹಾಗೂ ಸಮಾಜವಾದಿ ಪಕ್ಷದ ನಾಯಕ ಸ್ವಾಮಿ ಪ್ರಸಾದ್ ವೌರ್ಯ(Swami Prasad Maurya) ವಿರುದ್ಧ ಮಧ್ಯಪ್ರದೇಶ ಪೊಲೀಸರು ಶುಕ್ರವಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಹಿಂದೂ ಮಹಾಸಭಾ ನೀಡಿದ ದೂರನ್ನು ಆಧರಿಸಿ ಗ್ವಾಲಿಯರ್ ಪೊಲೀಸ್ ಠಾಣೆಯಲ್ಲಿ ಸ್ವಾಮಿ ಪ್ರಸಾದ್ ವೌರ್ಯ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಯೆಂದು ಮೂಲಗಳು ತಿಳಿಸಿವೆ. ವೌರ್ಯ ಅಲ್ಲದೆ ಇತರ ಎಂಟು ಮಂದಿಯನ್ನು ಕೂಡಾ ಎಫ್ ಐಆರ್(FIR) ನಲ್ಲಿ ಉಲ್ಲೇಖಿಸಲಾಗಿದೆಯೆಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಅವಧಿ ಭಾಷೆಯಲ್ಲಿ ಬರೆದ ಪುರಾಣ ಕಾವ್ಯವಾದ ರಾಮಚರಿತ ಮಾನಸವು ರಾಮಾಯಣ ಮಹಾಕಾವ್ಯವನ್ನು ಆಧರಿಸಿದೆ. 16ನೇ ಶತಮಾನದ ಭಕ್ತಿ ಪಂಥ ಚಳವಳಿಯ ಕವಿಯ ತುಳಸಿದಾಸ್ ರಾಮಚರಿತ ಮಾನಸ್ ಕಾವ್ಯವನ್ನು ಬರೆದಿದ್ದರು.

ಉತ್ತರಪ್ರದೇಶದ ಪ್ರಮುಖ ಓಬಿಸಿ ನಾಯಕರಲ್ಲೊಬ್ಬರಾದ ಸ್ವಾಮಿ ಪ್ರಸಾದ್ ವೌರ್ಯ ಅವರು ‘ರಾಮಚರಿತ ಮಾನಸ ಕೃತಿ’ಯ ಕೆಲವು ನಿರ್ದಿಷ್ಟ ಶ್ಲೋಕಗಳು ಸಮಾಜದ ಒಂದು ದೊಡ್ಡ ವರ್ಗವನ್ನು ಜಾತಿ ಆಧಾರದಲ್ಲಿ ಅಪಮಾನಿಸುತ್ತದೆ. ಆದ್ದರಿಂದ  ಅದನ್ನು ನಿಷೇಧಿಸಬೇಕೆಂದು ಆಗ್ರಹಿಸಿದ್ದುದು ಭಾರೀ ವಿವಾದಕ್ಕೆ ಕಾರಣವಾಗಿತ್ತು.

ಸ್ವಾಮಿ ಪ್ರಸಾದ್ ವೌರ್ಯ ವಿರುದ್ಧ ಧರ್ಮ, ಜನಾಂಗ, ಜನ್ಮಸ್ಥಳ, ವಾಸ್ತವ್ಯ, ಭಾಷೆ ಇತ್ಯಾದಿ ನೆಲೆಯಲ್ಲಿ ವಿವಿಧ ಗುಂಪುಗಳ ನಡುವೆ ಶತ್ರುತ್ವಕ್ಕೆ ಪ್ರಚೋದನೆ ಹಾಗೂ ಶಾಂತಿಪಾಲನೆಗೆ ಧಕ್ಕೆಯುಂಟು ಮಾಡುವಂತಹ ಕೃತ್ಯದಲ್ಲಿ ತೊಡಗುವುದು ಸೇರಿದಂತೆ ಭಾರತೀಯ ದಂಡಸಂಹಿತೆ ಯ ಸೆಕ್ಷನ್ಗಳಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Similar News