ಆಂಧ್ರ: ಟಿಡಿಪಿ ಮುಖಂಡನ ಮೇಲೆ ಗುಂಡು ಹಾರಾಟ

Update: 2023-02-03 15:40 GMT

ಹೈದರಾಬಾದ್,ಫೆ.3: ಆಂಧ್ರಪ್ರದೇಶ(Andhra Pradesh)ದ ಪಾಲನಾಡು ಜಿಲ್ಲೆಯಲ್ಲಿ ತೆಲುಗುದೇಶಂ ಪಕ್ಷದ ಮಂಡಲ ಮಟ್ಟದ ನಾಯಕನೊಬ್ಬ ಮೇಲೆೆ ನಾಡಪಿಸ್ತೂಲಿನಿಂದ ಗುಂಡುಹಾರಿಸಿ ಗಾಯಗೊಳಿಸಿದ ಘಟನೆ ಶುಕ್ರವಾರ ವರದಿಯಾಗಿದೆ. ಪಕ್ಷದೊಳಗೆ ಅಧಿಕಾರಕ್ಕಾಗಿ ಕಿತ್ತಾಟವೇ ಈ ಕೃತ್ಯಕ್ಕೆ ಕಾರಣವೆನ್ನಲಾಗಿದೆ.

ಟಿಡಿಪಿಯ ಮಂಡಲ ಅಧ್ಯಕ್ಷ ವೆನ್ನ ಬಾಲಕೋಟಿ ರೆಡ್ಡಿ(Venna Balakoti Reddy) ಅವರ ಮೇಲೆ ಫೆಬ್ರವರಿ 1ರಂದು ಬುಧವಾರ ರಾತ್ರಿ ಅಲವಲಾ ಗ್ರಾಮದಲ್ಲಿರುವ ತನ್ನ ನಿವಾಸದಲ್ಲಿ ನಿದ್ರಿಸುತ್ತಿದ್ದಾಗ ಮುೂವರು ದುಷ್ಕರ್ಮಿಗಳು ಅವರ ಮೇಲೆ ದಾಳಿ ನಡೆಸಿದ್ದಾರೆಂದು ಆರೋಪಿಸಲಾಗಿದೆ.

ಗುಂಡಿನ ದಾಳಿಯಲ್ಲಿ ಬಾಲಕೋಟಿ ರೆಡ್ಡಿ ಅವರಿಗೆ ಗಾಯಗಳಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ದುಷ್ಕೃತ್ಯವನ್ನು ಎಸಗಿ ಆರೋಪಿಗಲನ್ನು ಪಿ.ವೆಂಕಟೇಶ್ವರ ರೆಡ್ಡಿ, ಪುಜಾಲಾ ರಾಮುಡು, ಅಂಜಿರೆಡ್ಡಿ ಎಂದು ಗುರುತಿಸಲಾಗಿದೆ.

ಬಾಲಕೋಟಿ ರೆಡ್ಡಿ ಮೇಲೆ ದಾಳಿ ನಡೆಸಲು ಪ್ರಕರಣದ ಪ್ರಮುಖ ಆರೋಪಿ ವೆಂಕಟೇಶ್ವರ ರೆಡ್ಡಿಯು, ಇತರ ಆರೋಪಿಗಳಿಗೆ 4 ಲಕ್ಷ ರೂ. ಪಾವತಿಸಿದ್ದಾನೆಂದು ಪಾಲನಾಡು ಪೊಲೀಸ್ ಅಧೀಕ್ಷಕ ರವಿಶಂಕರ ರೆಡ್ಡಿ ಅವರು ಪ್ರಕರಣಕ್ಕೆ ಸಂಬಂಧಿಸಿ ಬಿಡುಗಡೆಗೊಳಿಸಿದ ಪತ್ರಿಕಾ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಕೌಟುಂಬಿಕ ಸಂಘರ್ಷ ಹಾಗೂ ಅಧಿಕಾರಕ್ಕಾಗಿ ಕಿತ್ತಾಟವು ಈ ದಾಳಿಗೆ ಕಾರಣವೆಂದು ಅವರು ಹೇಳಿದ್ದಾರೆ. ಬಾಲಕೋಟಿ ರೆಡ್ಡಿ ಹಾಗೂ ವೆಂಕಟೇಶ್ವರ ರೆಡ್ಡಿ ಇಬ್ಬರೂ ನರಸಪೇಟೆ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ಅರವಿಂದ ಬಾಬು ಅವರ ಬೆಂಬಲಿಗರೆಂದು ಪೊಲೀಸರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Similar News