ಮತ ಒಡೆಯುವುದಕ್ಕಾಗಿಯೇ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಎಸ್‌ಡಿಪಿಐ: ಕಾಂಗ್ರೆಸ್ ಮುಖಂಡ ಆರ್.ವಿ. ದೇಶಪಾಂಡೆ

Update: 2023-02-03 15:41 GMT

ಉಡುಪಿ: ಕಳೆದ ಬಾರಿ ಅತಂತ್ರ ಸರಕಾರ ಇದ್ದಾಗ ನಮ್ಮ ಪಕ್ಷದಲ್ಲಿ ಗೆಲುವು ಸಾಧಿಸಿದ ಶಾಸಕರನ್ನು ಬಿಜೆಪಿ ಖರೀದಿ ಮಾಡಿರುವ ವಿಚಾರದಲ್ಲಿ ನಾವು ಪಾಠ ಕಲಿತಿದ್ದೇವೆ. ಈ ಬಾರಿ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವಾಗ ಬಹಳ ಎಚ್ಚರಿಕೆಯಿಂದ ಇರುತ್ತೇವೆ. ಅಭ್ಯರ್ಥಿಯ ಹಿನ್ನೆಲೆ ಹಾಗೂ ಪಕ್ಷ ನಿಷ್ಠೆ ನೋಡಿಕೊಂಡು ಹೈಕಮಾಂಡ್ ಟಿಕೆಟ್ ನೀಡಲಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.

ಉಡುಪಿ ಕಾಂಗ್ರೆಸ್ ಭವನದಲ್ಲಿ ಶುಕ್ರವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್‌ಡಿಪಿಐಯವರು ಮತ ಒಡೆಯುವುದಕ್ಕಾಗಿಯೇ ಚುನಾವಣೆ ಸ್ಪರ್ಧೆ ಮಾಡುತ್ತಿದ್ದಾರೆ. ಆದರೆ ರಾಜ್ಯದ ಮತದಾರರು ಬುದ್ದಿವಂತರಾಗಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ ಮತ್ತು ಎಸ್‌ಡಿಪಿಐಯವರು ಅಧಿಕಾರಕ್ಕೆ ಬರುವುದಿಲ್ಲ ಎಂಬುದು ಅವರಿಗೆ ಗೊತ್ತಿದೆ. ಹಾಗಾಗಿ ಮತದಾರರು ಕಾಂಗ್ರೆಸ್ ಪರವಾಗಿ ಮತ ಚಲಾಯಿಸಲಿದ್ದಾರೆ ಎಂದರು.

ಬಿಜೆಪಿ ಸರಕಾರ ಕೇವಲ ಘೋಷಣೆಗಳನ್ನು ಮಾತ್ರ ಮಾಡುತ್ತಿದೆ. ಅದನ್ನು ಅನುಷ್ಟಾನ ಮಾಡುತ್ತಿಲ್ಲ. ಕಮಿಷನ್ ಸರಕಾರ ದೇಶ ಹಾಗೂ ರಾಜ್ಯದಿಂದ ತೊಲಗುವವರೆಗೆ ಈ ನಾಡಿಗೆ ಭವಿಷ್ಯ ಇಲ್ಲ. ಮುಂದಿನ ಚುನಾವಣೆಯಲ್ಲಿ ಈ ಭಾಗದ ಮತದಾರರು ಕಾಂಗ್ರೆಸ್ ಶಕ್ತಿಯನ್ನು ಬೆಳೆಸಲಿದ್ದಾರೆ ಮತ್ತು ಪರ ನಿಲ್ಲುತ್ತಾರೆ ಎಂಬ ವಿಶ್ವಾಸ ಇದೆ. ಆದುದರಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಎಲ್ಲ ಸಂದರ್ಭದಲ್ಲೂ ಕಾಂಗ್ರೆಸ್ ಅನ್ಯಾಯದ ವಿರುದ್ಧ ಹೋರಾಟ ಕೂಡ ಮಾಡಿದೆ ಮತ್ತು ಜನರ ಪರವಾಗಿ ನಿಂತಿದೆ. ನಮಗೆ ಸಾಮಾಜಿಕ ನ್ಯಾಯ,  ಜಾತ್ಯತೀತತೆ, ಸರ್ವಧರ್ಮ ಹಾಗೂ ಸಂವಿಧಾನದಲ್ಲಿ ವಿಶ್ವಾಸ ಇದೆ. ಒಂದು ಕಾಲದಲ್ಲಿ ಕಾಂಗ್ರೆಸ್ ಭದ್ರಕೋಟೆ ಆಗಿದ್ದ ಕರಾವಳಿಯಲ್ಲಿ ಈ ಬಾರಿ ಇಲ್ಲಿನ ಮತದಾರರು ಕಾಂಗ್ರೆಸ್ ಪರ ಒಲವು ತೋರಿಸಲಿದ್ದಾರೆ ಎಂದರು.

ಕರಾವಳಿ ಪ್ರಜಾಧ್ವನಿ ಯಾತ್ರೆ
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೊಡಗು ಹಾಗೂ ಚಿಕ್ಕಮಗಳೂರು ಜಿಲ್ಲೆಗಳ 26 ಕ್ಷೇತ್ರಗಳಲ್ಲಿ ಸಂಚರಿಸಲಿರುವ ಕಾಂಗ್ರೆಸ್ ಕರಾವಳಿ- ಮಲೆನಾಡು ಪ್ರಜಾಧ್ವನಿ ಯಾತ್ರೆಯು ಫೆ.5ರಿಂದ ಸುಳ್ಯ ಕ್ಷೇತ್ರದಿಂದ ಆರಂಭಗೊಳ್ಳಲಿದ್ದು, ಈ ಯಾತ್ರೆಯ ಪ್ರಯುಕ್ತ ಪ್ರತಿ ಕ್ಷೇತ್ರದಲ್ಲಿ ಸಭೆ, ಮುಖಂಡರೊಂದಿಗೆ ಅಭಿವೃದ್ಧಿ ಬಗ್ಗೆ ಚರ್ಚೆ ಹಾಗೂ ಜನಾಭಿಪ್ರಾಯವನ್ನು ಪಡೆದುಕೊಳ್ಳಲಾಗುವುದು ಎಂದು  ಆರ್.ವಿ.ದೇಶಪಾಂಡೆ ತಿಳಿಸಿದರು.

ಮೊದಲ ಹಂತದಲ್ಲಿ ಫೆ.6ರಂದು ಮೂಡಬಿದ್ರೆ, 7ರಂದು ಕಾಪು, 8ರಂದು ಕುಂದಾಪುರ, 9ರಂದು ಶೃಂಗೇರಿಯಲ್ಲಿ ಯಾತ್ರೆ ನಡೆಯಲಿದೆ ಎಂದ ಅವರು, ಆಡಳಿತದಲ್ಲಿರುವ ಬಿಜೆಪಿ ಪಕ್ಷವು ಕಳೆದ ನಾಲ್ಕು ವರ್ಷಗಳಲ್ಲಿ ಕರಾವಳಿ ಭಾಗದಲ್ಲಿ ಯಾವುದೇ ರಚನಾತ್ಮಕ ಕೆಲಸಗಳು ಮಾಡಿರುವುದು ಕಾಣುತ್ತಿಲ್ಲ. ಇಲ್ಲಿನ ಕೈಗಾರಿಕೆಗಳು ಮುಚ್ಚುತ್ತಿವೆ. ಮೀನುಗಾರರ ಸಮಸ್ಯೆ ಕೂಡ ಪರಿಹರಿಸಿಲ್ಲ. ರಾಜ್ಯದಲ್ಲಿ ನಿರುದ್ಯೋಗ ಬೆಳೆಯುತ್ತಿವೆ. ಬೆಲೆ ಏರಿಕೆಯಿಂದ ಜನ ತತ್ತರಿಸಿ ಹೋಗಿದ್ದಾರೆ. ಇಂತಹ ಸಂದರ್ಭದಲ್ಲಿ ಜನ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರಬೇಕೆಂಬ ನಿರೀಕ್ಷೆಯಲ್ಲಿದ್ದಾರೆ ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ವಿಧಾನಪರಿಷತ್‌ನ ವಿಪಕ್ಷನಾಯಕ ಬಿ.ಕೆ.ಹರಿಪ್ರಸಾದ್, ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಮಾಜಿ ಶಾಸಕ ಗೋಪಾಲ ಪೂಜಾರಿ, ಮುಖಂಡರಾದ ಮೋಹನ್, ನವೀನ್ ಡಿಸೋಜ, ದೀಪಕ್  ಕೋಟ್ಯಾನ್, ಭಾಸ್ಕರ ರಾವ್ ಕಿದಿಯೂರು, ಬಿ.ನರಸಿಂಹಮೂರ್ತಿ, ಬಿ.ಕುಶಲ್ ಶೆಟ್ಟಿ, ರಮೇಶ್ ಕಾಂಚನ್ ಉಪಸ್ಥಿತರಿದ್ದರು.

ಕುದುರೆ ವ್ಯಾಪಾರಕ್ಕೆ ಅವಕಾಶವೇ ಇಲ್ಲ: ಹರಿಪ್ರಸಾದ್

ಈ ಹಿಂದೆ ಎರಡು ಬಾರಿ ರಾಜ್ಯದಲ್ಲಿ ಅತಂತ್ರ ಸರಕಾರ ಇದ್ದಾಗ ಬಿಜೆಪಿ ಅಧಿಕಾರಕ್ಕೆ ಬಂದಿತ್ತು. ಆಗ ಸ್ಪಷ್ಟವಾದ ಬಹುಮತ ಯಾರಿಗೂ ಇರಲಿಲ್ಲ.  ಅಮಿತ್ ಶಾ ರೌಡಿ ಇದ್ದ ಹಾಗೆ, ಶಾಸಕರನ್ನು ಖರೀದಿಸಿ ಅಧಿಕಾರ ಮಾಡುತ್ತೇವೆ ಎಂದು ಬಿಜೆಪಿ ಶಾಸಕ ಯೋಗೇಶ್ವರ್ ಹೇಳಿದ್ದಾರೆ. ಆದರೆ ಅದಕ್ಕೆಲ್ಲ ಅವಕಾಶ ಇರುವುದು ಅತಂತ್ರ ಸರಕಾರ ಇದ್ದರೆ ಮಾತ್ರ. ಈ ಬಾರಿ ಕಾಂಗ್ರೆಸ್ ಸ್ಪಷ್ಟವಾದ ಬಹುಮತ ಪಡೆಯಲಿರುವುದರಿಂದ ಕುದುರೆ ವ್ಯಾಪಾರಕ್ಕೆ ಅವಕಾಶ ಇಲ್ಲ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ತಿಳಿಸಿದರು.

ಕೋಲಾರದ ಕಾರ್ಯಕ್ರಮದಲ್ಲಿ ಭಾಗವಹಿಸದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಕೋಲಾರದ ಕಾರ್ಯಕ್ರಮ ಇಂದು ನಡೆಯುತ್ತಿದೆ. ನಾನು ಇಲ್ಲಿ ಇದ್ದೇನೆ. ನನಗೆ ಕಾರವಳಿ ಮಲೆನಾಡು ಜಿಲ್ಲೆಗಳ ಜವಾಬ್ದಾರಿ ಕೊಟ್ಟಿದ್ದಾರೆ. ಸಿದ್ಧರಾಮಯ್ಯ ಉತ್ತರ ಕರ್ನಾಟಕದಲ್ಲಿ ಹಾಗೂ ಡಿ.ಕೆ.ಶಿವಕುಮಾರ್ ದಕ್ಷಿಣ ಕರ್ನಾಟಕದಲ್ಲಿದ್ದಾರೆ ಎಂದರು.

ಪರಮೇಶ್ವರ್ ಮತ್ತು ನನ್ನ ಮಧ್ಯೆ ಯಾವುದೇ ಮುನಿಸಿಲ್ಲ. ಅದು ಕೇವಲ ಮಾಧ್ಯಮದ ಸೃಷ್ಠಿ. ನಮ್ಮ ಪಕ್ಷದಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯ ಇಲ್ಲ ಎಂದು ಹೇಳಿದರು. ಅಭ್ಯರ್ಥಿಗಳ ಪಟ್ಟಿ ಬಗ್ಗೆ ಕೆಪಿಸಿಸಿ ಚುನಾವಣಾ ಕಮಿಟಿಯಲ್ಲಿ ಸುಧೀರ್ಘ ಚರ್ಚೆ ಮಾಡಲಾಗಿದೆ. ಪ್ರಾಥಮಿಕ ಪ್ರಕ್ರಿಯೆಯನ್ನು ಮುಗಿಸಲಾಗಿದೆ. ಫ್ರೆಬವರಿ ಅಂತ್ಯದಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಆಗುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದರು.

Similar News