ಅದಾನಿ ಪವರ್ ಜೊತೆಗಿನ ಒಪ್ಪಂದ ಪರಿಷ್ಕರಿಸಲು ಮುಂದಾದ ಬಾಂಗ್ಲಾದೇಶ

ನಮಗೆ ಸಂಬಂಧವಿಲ್ಲ ಎಂದ ಭಾರತ ಸರಕಾರ

Update: 2023-02-03 18:00 GMT

ಹೊಸದಿಲ್ಲಿ, ಫೆ. 3: ವಿದ್ಯುತ್ ಖರೀದಿಸಲು ಅದಾನಿ ಪವರ್(Adani Power) ಕಂಪೆನಿಯೊಂದಿಗೆ 2017ರಲ್ಲಿ ಮಾಡಿಕೊಂಡಿರುವ ಒಪ್ಪಂದವನ್ನು ಪರಿಷ್ಕರಿಸಲು ಬಾಂಗ್ಲಾದೇಶ(Bangladesh) ಬಯಸಿದೆ ಎಂಬ ವರದಿಗಳಿಗೂ ತನಗೂ ಸಂಬಂಧವಿಲ್ಲ ಎಂದು ಭಾರತ ಸರಕಾರ(Government of India) ಗುರುವಾರ ಹೇಳಿದೆ.

ಝಾರ್ಖಂಡ್ ನ ಗೊಡ್ಡ ಜಿಲ್ಲೆಯಲ್ಲಿರುವ ಅದಾನಿ ಪವರ್ ಕಂಪೆನಿಯ ಉಷ್ಣ ವಿದ್ಯುತ್ ಸ್ಥಾವರದಿಂದ ವಿದ್ಯುತ್ ಖರೀದಿಸಲು ಸರಕಾರಿ ಒಡೆತನದ ಬಾಂಗ್ಲಾದೇಶ ವಿದ್ಯುತ್ ಅಭಿವೃದ್ಧಿ ಮಂಡಳಿಯು ಒಪ್ಪಂದ ಮಾಡಿಕೊಂಡಿತ್ತು. ಅದನ್ನು ಪರಿಷ್ಕರಿಸಲು ಮಂಡಳಿ ಬಯಸಿದೆ ಎಂದು ಬಾಂಗ್ಲಾದೇಶದ ಯುಎನ್ಬಿ ಸುದ್ದಿ ಸಂಸ್ಥೆ ವರದಿ ಮಾಡಿದೆ. ಕಲ್ಲಿದ್ದಲು ಆಧಾರಿತ ವಿದ್ಯುತ್ ನ ಮಾರಾಟ ಬೆಲೆಯನ್ನು ಕಡಿಮೆ ಮಾಡಬೇಕು ಎಂಬುದಾಗಿ ಬಾಂಗ್ಲಾದೇಶ ವಿದ್ಯುತ್ ಅಭಿವೃದ್ಧಿ ಮಂಡಳಿಯ ಅಧಿಕಾರಿಗಳು ಬಯಸಿದ್ದಾರೆ ಎನ್ನಲಾಗಿದೆ.

ಈ ವಿಷಯದ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ(Arindam Bagchi)ಯವರ ಪ್ರತಿಕ್ರಿಯೆ ಕೋರಿದಾಗ, ‘‘ಸಾರ್ವಭೌಮ ಸರಕಾರ ಮತ್ತು ಭಾರತೀಯ ಕಂಪೆನಿಯೊಂದರ ನಡುವೆ ನಡೆದ ಒಪ್ಪಂದದ ಬಗ್ಗೆ ನೀವು ಕೇಳುತ್ತಿದ್ದೀರಿ ಎಂದು ನಾನು ಭಾವಿಸುತ್ತೇನೆ. ಆ ಒಪ್ಪಂದದ ಬಗ್ಗೆ ನನಗೆ ಗೊತ್ತಿಲ್ಲ. ಈ ಒಪ್ಪಂದದಲ್ಲಿ ನಾವು ಒಳಗೊಂಡಿದ್ದೇವೆ ಎಂದೂ ನನಗನಿಸುವುದಿಲ್ಲ’’ ಎಂದು ಅವರು ಹೇಳಿದರು.

Similar News