ದ್ವೇಷ ಭಾಷಣ ಮಾಡುವುದಿಲ್ಲ ಎಂದು ಖಚಿತವಿದ್ದರೆ ಮಾತ್ರ ಹಿಂದುತ್ವ ಗುಂಪಿನ ರ‍್ಯಾಲಿಗೆ ಅನುಮತಿ ನೀಡಿ: ಸುಪ್ರೀಂ ಕೋರ್ಟ್‌

Update: 2023-02-03 16:40 GMT

ಹೊಸದಿಲ್ಲಿ: ಯಾವುದೇ ದ್ವೇಷದ ಭಾಷಣ ಮಾಡದಂತೆ ನೋಡಿಕೊಳ್ಳಲು ಸಾಧ್ಯವಾದರೆ ಮಾತ್ರ ಫೆಬ್ರವರಿ 5 ರಂದು ಮುಂಬೈನಲ್ಲಿ ಹಿಂದುತ್ವ ಸಂಘಟನೆಗಳು ಆಯೋಜಿಸುವ ರ್ಯಾಲಿಗೆ ಅನುಮತಿ ನೀಡುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಮಹಾರಾಷ್ಟ್ರ ಸರ್ಕಾರಕ್ಕೆ ಸೂಚಿಸಿದೆ ಎಂದು barandbench.com ವರದಿ ಮಾಡಿದೆ.

ನ್ಯಾಯಮೂರ್ತಿಗಳಾದ ಕೆಎಂ ಜೋಸೆಫ್ ಮತ್ತು ಜೆಬಿ ಪರ್ದಿವಾಲಾ ಅವರ ಪೀಠವು "ಹಿಂದೂ ಜನ ಆಕ್ರೋಶ ಸಭೆ" ಕಾರ್ಯಕ್ರಮದ ವಿಡಿಯೋ ರೆಕಾರ್ಡಿಂಗ್ ಮಾಡಿ, ಅದರ ಪ್ರತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ರಾಜ್ಯ ಸರ್ಕಾರವನ್ನು ಕೇಳಿದೆ.

"ಅನುಮತಿ ನೀಡಿದರೆ, ಕಾನೂನನ್ನು ಧಿಕ್ಕರಿಸಿ ಮತ್ತು ಕಾನೂನು ಸುವ್ಯವಸ್ಥೆ ಉಲ್ಲಂಘಿಸುವ ಯಾವುದೇ ದ್ವೇಷದ ಭಾಷಣವನ್ನು ಯಾರೂ ಮಾಡಬಾರದು ಎಂಬ ಷರತ್ತಿಗೆ ಒಳಪಟ್ಟಿರಬೇಕು" ಎಂದು ನ್ಯಾಯಾಲಯವು ತನ್ನ ಆದೇಶದಲ್ಲಿ ಹೇಳಿದೆ.

ಹಿಂದುತ್ವ ಸಂಘಟನೆಗಳ ಒಕ್ಕೂಟ ʼಸಕಲ ಹಿಂದೂ ಸಮಾಜ್ʼ ಆಯೋಜಿಸುವ ಈ ಕಾರ್ಯಕ್ರಮವನ್ನು ನಿಷೇಧಿಸುವಂತೆ ಕೋರಿ ಶಹೀನ್ ಅಬ್ದುಲ್ಲಾ ಎಂಬುವರು ಸಲ್ಲಿಸಿದ ಮನವಿಯನ್ನು ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ. ಜನವರಿ 29 ರಂದು ಈ ಸಂಘಟನೆಯು ನಡೆಸಿದ ರ್ಯಾಲಿಯಲ್ಲಿ ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷದ ಭಾಷಣಗಳನ್ನು ಮಾಡಲಾಗಿದೆ ಎಂದು ಅರ್ಜಿದಾರರು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ.

ಜನವರಿ 29 ರಂದು ನಡೆದ ರ್ಯಾಲಿಯಲ್ಲಿ ಪಕ್ಷದ ಮುಂಬೈ ಘಟಕದ ಅಧ್ಯಕ್ಷ ಆಶಿಶ್ ಶೆಲಾರ್, ಮಹಾರಾಷ್ಟ್ರ ಸಂಸದರಾದ ಗೋಪಾಲ್ ಶೆಟ್ಟಿ ಮತ್ತು ಮನೋಜ್ ಕೋಟಕ್ ಮತ್ತು ಮಾಜಿ ಸಂಸದ ಕಿರಿತ್ ಸೋಮಯ್ಯ ಸೇರಿದಂತೆ ಹಲವಾರು ಬಿಜೆಪಿ ನಾಯಕರು ಭಾಗವಹಿಸಿದ್ದರು. ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನಾ ಬಣದ ಹಲವಾರು ನಾಯಕರು ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮದ ಭಾಷಣಕಾರರಲ್ಲಿ ಒಬ್ಬರಾದ ತೆಲಂಗಾಣ ಶಾಸಕ ಟಿ ರಾಜಾ ಸಿಂಗ್ ಅವರು ಮುಸ್ಲಿಮರು ನಡೆಸುವ ಅಂಗಡಿಗಳಿಂದ ವಸ್ತುಗಳನ್ನು ಬಹಿಷ್ಕರಿಸುವಂತೆ ಹಿಂದೂಗಳನ್ನು ಒತ್ತಾಯಿಸಿದ್ದರು.  

ಕಳೆದ ಮೂರು ತಿಂಗಳಲ್ಲಿ, ಸಕಲ್ ಹಿಂದೂ ಸಮಾಜವು ಮಹಾರಾಷ್ಟ್ರದ 20 ಜಿಲ್ಲೆಗಳಲ್ಲಿ ಇದೇ ರೀತಿಯ ರ್ಯಾಲಿಗಳನ್ನು ನಡೆಸಿದೆ.

‌  

Similar News