ಅದಾನಿ ಶೇರುಗಳ ಮರುವೌಲ್ಯಮಾಪನವನ್ನು ಎನ್ಎಸ್ಇ ಇನ್ನೂ ಯಾಕೆ ಮಾಡಿಲ್ಲ: ಮಹುವಾ ಮೋಯಿತ್ರಾ

ಅಮೆರಿಕದ ಡೌ ಜೋನ್ಸ್ ಸೂಚ್ಯಂಕದಿಂದ ಅದಾನಿ ಎಂಟರ್‌ ಪ್ರೈಸಸ್ ಹೊರಗೆ

Update: 2023-02-03 16:31 GMT

ಹೊಸದಿಲ್ಲಿ, ಫೆ. 3: ವಂಚನೆಯ ಆರೋಪ ಎದುರಿಸುತ್ತಿರುವ ಅದಾನಿ(Adani) ಗುಂಪಿನ ಮುಂಚೂಣಿ ಕಂಪೆನಿ ಅದಾನಿ ಎಂಟರ್‌ ಪ್ರೈಸಸ್ ನ್ನು ಫೆಬ್ರವರಿ 7ರಿಂದ ತನ್ನ ಸೂಚ್ಯಂಕಗಳಿಂದ ತೆಗೆದು ಹಾಕಲು ಅಮೆರಿಕದ ಶೇರು ವಿನಿಮಯ ಕೇಂದ್ರ ಎಸ್ ಆ್ಯಂಡ್ ಪಿ ಡೌ ಜೋನ್ಸ್ (S&P Dow Jones)ನಿರ್ಧರಿಸಿದೆ. ಆದರೆ, ಅದಾನಿ ಶೇರುಗಳು ತನ್ನ ಸೂಚ್ಯಂಕದಲ್ಲಿ ಮುಂದುವರಿಯುವ ಅರ್ಹತೆಯನ್ನು ಹೊಂದಿವೆಯೇ ಎನ್ನುವ ಮೌಲ್ಯಮಾಪನವನ್ನು ರಾಷ್ಟ್ರೀಯ ಶೇರು ವಿನಿಮಯ ಕೇಂದ್ರ (NSE) ಇನ್ನೂ ಯಾಕೆ ಮಾಡಿಲ್ಲ ಎಂದು ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೋಯಿತ್ರಾ(Mahua Moitra) ಶುಕ್ರವಾರ ಪ್ರಶ್ನಿಸಿದ್ದಾರೆ.

ವಂಚನೆ ಹಾಗೂ ಶೇರು ಮಾರುಕಟ್ಟೆಯಲ್ಲಿ ಹಸ್ತಕ್ಷೇಪ ಮಾಡುವ ಮೂಲಕ ಅದಾನಿ ಗುಂಪಿನ ಶೇರುಗಳ ಮೌಲ್ಯವನ್ನು ಕೃತಕವಾಗಿ ಹೆಚ್ಚಿಸಲಾಗಿದೆ ಎಂಬ ಆರೋಪಗಳ ಬಳಿಕ, ಮಾಧ್ಯಮ ಮತ್ತು ಶೇರುದಾರರ ವಿಶ್ಲೇಷಣೆಗಳ ಆಧಾರದಲ್ಲಿ ಅದಾನಿ ಎಂಟರ್‌ ಪ್ರೈಸಸ್ ಕಂಪೆನಿಯನ್ನು ತನ್ನ ಸೂಚ್ಯಂಕದಿಂದ ಹೊರಗಿಡುವ ನಿರ್ಧಾರವನ್ನು ತೆಗೆದುಕೊಂಡಿರುವುದಾಗಿ ಎಸ್ ಆ್ಯಂಡ್ ಪಿ ಡೌ ಜೋನ್ಸ್ ಗುರುವಾರ ತಿಳಿಸಿದೆ.

ಇದು ಅದಾನಿ ಗುಂಪಿಗೆ ತೀವ್ರ ಹಿನ್ನಡೆಯಾಗಿದೆ.

‘‘ತಪ್ಪು ಲೆಕ್ಕ ಒಪ್ಪಿಸುವಿಕೆ ಮತ್ತು ವಂಚನಾ ವಿಧಾನಗಳ ಮೂಲಕ ಅದಾನಿ ಗುಂಪಿನ ಶೇರುಗಳ ಮೌಲ್ಯವನ್ನು ಕೃತಕವಾಗಿ ಹೆಚ್ಚಿಸಲಾಗಿದೆ ಎಂಬ ಆರೋಪಗಳ ಬಳಿಕ, ಎಸ್ ಆ್ಯಂಡ್ ಪಿ ಡೌ ಜೋನ್ಸ್ ತನ್ನ ಡೌ ಜೋನ್ಸ್ ಸೂಚ್ಯಂಕಗಳಿಂದ ಅದಾನಿ ಎಂಟರ್‌ ಪ್ರೈಸಸ್ ಕಂಪೆನಿಯನ್ನು ತೆಗೆದುಹಾಕಿದೆ. ಅಂತರ್ರಾಷ್ಟ್ರೀಯ ಶೇರು ವಿನಿಮಯ ಕೇಂದ್ರಗಳು ಇಂಥ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿರುವಾಗ, ಭಾರತದ ಎನ್ಎಸ್ಇ ಅದಾನಿ ಶೇರುಗಳ ಸದಸ್ಯತ್ವ ವೌಲ್ಯಮಾಪನವನ್ನು ಇನ್ನೂ ಯಾಕೆ ಮಾಡುತ್ತಿಲ್ಲ?’’ ಎಂದು ಟಿಎಮ್ಸಿಯ ದಿಟ್ಟ ನಿಲುವಿನ ನಾಯಕಿ ಟ್ವಿಟರ್ನಲ್ಲಿ ಪ್ರಶ್ನಿಸಿದ್ದಾರೆ.

ಸೆಬಿ ಸಮಿತಿಯಿಂದ ಸಿರಿಲ್ ಶ್ರಾಫ್ ಹೊರಗೆ ಬರಲಿ

ಭಾರತೀಯ ಶೇರು ವಿನಿಮಯ ಮಂಡಳಿ (ಸೆಬಿ)ಯ ಕಾರ್ಪೊರೇಟ್ ಆಡಳಿತ ಮತ್ತು ಆಂತರಿಕ ವ್ಯವಹಾರ (ಕಾರ್ಪೊರೇಟ್ ಗವರ್ನನ್ಸ್ ಆ್ಯಂಡ್ ಇನ್ಸೈಡರ್ ಟ್ರೇಡಿಂಗ್)ದ ಮೇಲಿನ ಸಮಿತಿಯು ಅದಾನಿ ವಿವಾದದ ಬಗ್ಗೆ ತನಿಖೆ ಮಾಡುವುದಾದರೆ, ಸಮಿತಿಯಿಂದ ವಕೀಲ ಸಿರಿಲ್ ಶ್ರಾಫ್ ಹೊರಗೆ ಬರಬೇಕು ಎಂದು ಇನ್ನೊಂದು ಟ್ವೀಟ್ ನಲ್ಲಿ ಮೋಯಿತ್ರಾ ಒತ್ತಾಯಿಸಿದ್ದಾರೆ. ಯಾಕೆಂದರೆ ಸಿರಿಲ್ ಶ್ರಾಫ್(Cyril Shroff) ರ ಮಗಳು ಗೌತಮ್ ಅದಾನಿ (Gautham Adani)ಮಗನನ್ನು ವಿವಾಹವಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

‘‘ಖ್ಯಾತ ವಕೀಲ ಸಿರಿಲ್ ಶ್ರಾಫ್ ಬಗ್ಗೆ ಅಗಾಧ ಗೌರವವಿದೆ. ಆದರೆ ಅವರ ಮಗಳು ಗೌತಮ್ ಅದಾನಿಯ ಮಗನನ್ನು ಮದುವೆಯಾಗಿದ್ದಾರೆ. ಸೆಬಿಯ ಕಾರ್ಪೊರೇಟ್ ಆಡಳಿತ ಮತ್ತು ಆಂತರಿಕ ವ್ಯವಹಾರದ ಮೇಲಿನ ಸಮಿತಿಯಲ್ಲಿ ಶ್ರಾಫ್ ಕೆಲಸ ಮಾಡುತ್ತಿದ್ದಾರೆ. ಒಂದು ವೇಳೆ, ಸೆಬಿಯು ಅದಾನಿ ವಿವಾದದ ಬಗ್ಗೆ ತನಿಖೆ ಮಾಡುವುದಾದರೆ, ಶ್ರಾಫ್ ಸಮಿತಿಯಿಂದ ಹೊರಗೆ ಬರಬೇಕು. ಯಾಕೆಂದರೆ ನಮ್ಮ ಮನಸ್ಸಿನಲ್ಲಿ ಏನಿದೆಯೋ ನಾವು ಅದನ್ನೇ ಮಾಡುತ್ತೇವೆ’’ ಎಂದು ಅವರು ಬರೆದಿದ್ದಾರೆ.

ಎಲ್ಐಸಿ ಮೇಲೆ ನಿಗಾ ಇಡಿ ಐಆರ್‌ಡಿಎಐ ಗೆ ಮನವಿ

ಸರಕಾರಿ ಒಡೆನದ ಜೀವ ವಿಮಾ ನಿಗಮ (LIC)ದ ಚಟುವಟಿಕೆಗಳ ಮೇಲೆ ನಿಗಾ ಇಡುವಂತೆ ವಿಮಾ ನಿಯಂತ್ರಕ ಸಂಸ್ಥೆ ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (IRDAI)ಕ್ಕೆ ಟಿಎಮ್ಸಿ ಸಂಸದೆ ಮಹುವಾ ಮೋಯಿತ್ರಾ ಗುರುವಾರ ಮನವಿ ಮಾಡಿದ್ದಾರೆ.

ಎಲ್ಐಸಿಯು ಅದಾನಿ ಗುಂಪಿನ ಕಂಪೆನಿಗಳ ಶೇರುಗಳಲ್ಲಿ 30,000 ಕೋಟಿ ರೂಪಾಯಿಗೂ ಅಧಿಕ ಹೂಡಿಕೆ ಮಾಡಿದೆ.

Similar News