ಹಿಂದೂ ಮಹಿಳೆಯರನ್ನು ಅಪಹರಿಸುತ್ತಾರೆ, ಭಯೋತ್ಪಾದನೆ ಮಾಡುತ್ತಾರೆ: ಮುಸ್ಲಿಮರ ಬಗ್ಗೆ ರಾಮ್ ದೇವ್‌ ವಿವಾದಾತ್ಮಕ ಹೇಳಿಕೆ

Update: 2023-02-03 16:47 GMT

ಜೈಪುರ: ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮಕ್ಕೆ ಹೋಲಿಸಿದರೆ ಹಿಂದೂ ಧರ್ಮ ಉತ್ತಮ ಎಂದ ರಾಮದೇವ್‌, ಹಿಂದೂ ಮಹಿಳೆಯರನ್ನು ಅಪಹರಿಸುವ ಮುಸ್ಲಿಮರು ಭಯೋತ್ಪಾದನೆ ಮಾಡುತ್ತಿದ್ದಾರೆ ಎಂದು ವಿವಾದಾತ್ಮಕ ಭಾಷಣ ಮಾಡಿದ್ದಾರೆ.

ಹಿಂದೂ ಧರ್ಮವು ತನ್ನ ಅನುಯಾಯಿಗಳಿಗೆ ಒಳ್ಳೆಯದನ್ನು ಮಾಡಲು ಕಲಿಸಿದರೆ ಎರಡು ಧರ್ಮಗಳು ಮತಾಂತರದ ಗೀಳನ್ನು ಹೊಂದಿದೆ ಎಂದು ಅವರು ಆರೋಪಿಸಿದರು.

"ಮುಸ್ಲಿಮರು ದಿನಕ್ಕೆ ಐದು ಬಾರಿ ನಮಾಝ್ ಮಾಡುತ್ತಾರೆ, ನಂತರ ತಮಗೆ ಏನು ಬೇಕು ಅದನ್ನು ಮಾಡುತ್ತಾರೆ, ಅವರು ಹಿಂದೂ ಹುಡುಗಿಯರನ್ನು ಅಪಹರಿಸಿ ಎಲ್ಲಾ ರೀತಿಯ ಪಾಪಗಳನ್ನು ಮಾಡುತ್ತಾರೆ. ನಮ್ಮ ಮುಸ್ಲಿಂ ಸಹೋದರರು ಬಹಳಷ್ಟು ಪಾಪಗಳನ್ನು ಮಾಡುತ್ತಾರೆ ಅದಾಗ್ಯೂ ಅವರು ಖಂಡಿತವಾಗಿಯೂ ನಮಾಝ್ ಅನ್ನು ಕೂಡಾ ಮಾಡುತ್ತಾರೆ. ಆದರೆ ಹಿಂದೂ ಧರ್ಮ ಈ ರೀತಿ ಅಲ್ಲ, ”ಎಂದು ಅವರು ಬಾರ್ಮರ್‌ನಲ್ಲಿ ನಡೆದ ಸಭೆಯಲ್ಲಿ ಹೇಳಿದರು.

ಅವರ ಭಾಷಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

"ನಾನು ಯಾರನ್ನೂ ಟೀಕಿಸುವುದಿಲ್ಲ. ಕೆಲವರು ಇಡೀ ಜಗತ್ತನ್ನು ಇಸ್ಲಾಂಗೆ ಪರಿವರ್ತಿಸುವ ಬಗ್ಗೆ ಮತ್ತು ಇನ್ನು ಕೆಲವರು ಜಗತ್ತನ್ನು ಕ್ರಿಶ್ಚಿಯನ್ ಧರ್ಮಕ್ಕೆ ಪರಿವರ್ತಿಸುವ ಗೀಳನ್ನು ಹೊಂದಿದ್ದಾರೆ" ಎಂದು ರಾಮ್‌ದೇವ್ ಹೇಳಿದರು.

ಮುಸ್ಲಿಮರ ಮೇಲಿನ ವಾಗ್ದಾಳಿಯನ್ನು ಮುಂದುವರೆಸಿದ ಅವರು, ಅವರು ಭಯೋತ್ಪಾದಕರಾಗಿರಲಿ ಅಥವಾ ಅಪರಾಧಿಗಳಾಗಿರಲಿ ಅವರು ನಮಾಝ್ ಮಾಡುತ್ತಾರೆ. ‌ ಆದರೆ, ಹಿಂಸಾಚಾರ ಮತ್ತು ಅಪ್ರಾಮಾಣಿಕತೆಯಲ್ಲಿ ತೊಡಗದಂತೆ ಹಿಂದೂ ಧರ್ಮವು ಜನರಿಗೆ ಕಲಿಸುತ್ತದೆ ಎಂದು ಹೇಳಿದರು.

ಮುಂಜಾನೆ ಬೇಗ ಎದ್ದೇಳಿ, ದೇವರನ್ನು ಪ್ರಾರ್ಥಿಸಿ, ಯೋಗ ಮಾಡಿ, ನಿಮ್ಮ ದೇವರನ್ನು ಪೂಜಿಸುವ ಮೂಲಕ ಒಳ್ಳೆಯ ಕೆಲಸ ಮತ್ತು ಒಳ್ಳೆಯ ಕಾರ್ಯಗಳನ್ನು ಮಾಡಿ. ಇದನ್ನೇ ನಮಗೆ ಹಿಂದೂ ಧರ್ಮ ಮತ್ತು ಸನಾತನ ಧರ್ಮ ಕಲಿಸುತ್ತದೆ ಎಂದು ರಾಮದೇವ್ ಹೇಳಿದರು.

Similar News