ಐಎಂಎಫ್ ಷರತ್ತು ಕಲ್ಪನೆಗೆ ಮೀರಿದೆ, ಒಪ್ಪಿಕೊಳ್ಳಲೇಬೇಕು: ಪಾಕ್ ಪ್ರಧಾನಿ

Update: 2023-02-03 17:31 GMT

ಇಸ್ಲಮಾಬಾದ್, ಫೆ.3: ಆರ್ಥಿಕ ನೆರವು ಒದಗಿಸಲು ಅಂತರಾಷ್ಟ್ರೀಯ ಹಣಕಾಸು ಸಂಸ್ಥೆ(IMF) ಮುಂದಿರಿಸಿದ ಷರತ್ತುಗಳು ಕಲ್ಪನೆಗೆ ಮೀರಿದ್ದರೂ ಅದನ್ನು ಒಪ್ಪಿಕೊಳ್ಳದೆ ದಾರಿಯಿಲ್ಲ ಎಂದು ಪಾಕಿಸ್ತಾನದ ಪ್ರಧಾನಿ ಶಹಬಾಝ್ ಶರೀಫ್ ಶುಕ್ರವಾರ ಹೇಳಿದ್ದಾರೆ.

`ಹೆಚ್ಚಿನ ವಿವರ ನೀಡಲು ನಾನು ಬಯಸುವುದಿಲ್ಲ. ಆದರೆ ನಮ್ಮ ಆರ್ಥಿಕ ಸವಾಲುಗಳು ಊಹೆಗೂ ಮೀರಿವೆ ಮತ್ತು ಐಎಂಎಫ್ನ ನೆರವು ಪಡೆಯಬೇಕಿದ್ದರೆ ನಾವು ಐಎಂಎಫ್ ಮುಂದಿರಿಸಿರುವ ಕಲ್ಪನೆಗೂ ಮೀರಿದ ಸವಾಲುಗಳನ್ನು ಒಪ್ಪಿಕೊಳ್ಳಬೇಕಾಗಿದೆ ಎಂದವರು ಹೇಳಿದ್ದಾರೆ.

ಆರ್ಥಿಕ  ಬಿಕ್ಕಟ್ಟಿಗೆ ಸಿಲುಕಿರುವ ಪಾಕಿಸ್ತಾನ ಐಎಂಎಫ್  ನಿಂದ ತುರ್ತು ಆರ್ಥಿಕ ನೆರವಿನ ನಿರೀಕ್ಷೆಯಲ್ಲಿದೆ, ಆದರೆ ಈ ಕುರಿತ ಮಾತುಕತೆ ಇನ್ನೂ ಅಂತಿಮ ಹಂತದಲ್ಲಿದೆ. ಆರ್ಥಿಕ ನೆರವು ಮಂಜೂರು ಮಾಡಬೇಕಿದ್ದರೆ ಐಎಂಎಫ್ ಮುಂದಿರಿಸಿದ ಕೆಲವು ಕಠಿಣ ಷರತ್ತುಗಳು ಪಾಕ್ ಸರಕಾರಕ್ಕೆ ಬಿಸಿತುಪ್ಪವಾಗಿದೆ. ತೆರಿಗೆ ಹೆಚ್ಚಳ ಮತ್ತು ಸಬ್ಸಿಡಿ ರದ್ದತಿಯ ಷರತ್ತಿಗೆ ಒಪ್ಪಿದರೆ ಅಕ್ಟೋಬರ್ನಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಹಿನ್ನಡೆಯಾಗುವ ಭೀತಿ ಸರಕಾರಕ್ಕಿದೆ. 

ಈ ಮಧ್ಯೆ, ದೇಶದ ವಿದೇಶಿ ವಿನಿಮಯ ದಾಸ್ತಾನು ಮತ್ತೆ 3.1 ಶತಕೋಟಿ ಡಾಲರ್ಗೆ ಕುಸಿದಿದ್ದು ಇದು ಮೂರು ವಾರಗಳ ಆಮದಿಗೆ ಸಾಕಾಗಬಹುದು ಎಂದು ಪಾಕಿಸ್ತಾನದ ಸೆಂಟ್ರಲ್ ಬ್ಯಾಂಕ್ ಹೇಳಿದೆ. ದೇಶದಲ್ಲಿ ದೈನಂದಿನ ಅಗತ್ಯದ ವಸ್ತುಗಳ ಕೊರತೆ ಹೆಚ್ಚುತ್ತಿರುವಂತೆಯೇ ಹಣದುಬ್ಬರದ ಪ್ರಮಾಣ ಕಳೆದ 48 ವರ್ಷಗಳಲ್ಲೇ ಗರಿಷ್ಟ ಮಟ್ಟಕ್ಕೆ ತಲುಪಿದೆ ಎಂದು ಮಾಧ್ಯಮಗಳ ವರದಿ ಹೇಳಿದೆ.

ಪಾಕಿಸ್ತಾನ 2019ರಲ್ಲಿ ಐಎಂಎಫ್ನಿಂದ 6 ಶತಕೋಟಿ ಡಾಲರ್ನಷ್ಟು ಸಾಲ ಪಡೆಯಲು ಶಕ್ತವಾಗಿತ್ತು. ಈ ಮೊತ್ತಕ್ಕೆ  2022ರಲ್ಲಿ ಮತ್ತೆ 1 ಶತಕೋಟಿ ಡಾಲರ್ ಹೆಚ್ಚುವರಿ ಸಾಲ ಒದಗಿಸಿದೆ. ಆದರೆ ಸಾಲ ಮರುಪಾವತಿಸಲು ಬಾಕಿ ಇರುವುದರಿಂದ ಇದೀಗ ಪಾಕ್ ಕೋರಿರುವ ಹೊಸ ಸಾಲ ಮಂಜೂರುಮಾಡಲು ಐಎಂಎಫ್ ಕೆಲವು ಕಠಿಣ ಷರತ್ತು ಮುಂದಿರಿಸಿದೆ.

Similar News