ಟಿ20 ವಿಶ್ವಕಪ್ ಗೆಲ್ಲುವ ವಿಶ್ವಾಸದಲ್ಲಿದ್ದೇವೆ: ಹರ್ಮನ್‌ಪ್ರೀತ್ ಕೌರ್

Update: 2023-02-04 10:09 GMT

ಕೆಲವೇ ದಿನಗಳಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಆರಂಭವಾಗಲಿರುವ ಐಸಿಸಿ ಮಹಿಳಾ ಕ್ರಿಕೆಟ್ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾಗವಹಿಸಲು ಸಿದ್ಧರಾಗಿರುವ ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ತಮ್ಮ ತಂಡದ ವಿಶ್ವಕಪ್ ಸಿದ್ಧತೆಯ ಬಗ್ಗೆ ಇಲ್ಲಿ ಹೇಳಿಕೊಂಡಿದ್ದಾರೆ 

ಐಸಿಸಿ ಮಹಿಳಾ ಟಿ20 ವಿಶ್ವಕಪ್‌ನ ನಮ್ಮ ಕೊನೆಯ ಪಂದ್ಯವನ್ನು 86,174 ಪ್ರೇಕ್ಷಕರು ವೀಕ್ಷಿಸಿದ್ದರು. ಈ ಸಲ ನಮ್ಮ ಅಭಿಯಾನವನ್ನು ಆರಂಭಿಸಲು ನಾವು ತಯಾರಿ ನಡೆಸುತ್ತಿರುವಾಗ ಇದು ದೊಡ್ಡಮಟ್ಟದ ಸ್ಫೂರ್ತಿ.

ಮೂರು ವರ್ಷಗಳ ಹಿಂದೆ ಅಂತರ್‌ರಾಷ್ಟ್ರೀಯ ಮಹಿಳಾ ದಿನದಂದು ನಡೆದ ಆ ಪಂದ್ಯ ವಿಶ್ವಾದ್ಯಂತ ಮಹಿಳಾ ಕ್ರೀಡೆಗೆ ಬಹುದೊಡ್ಡ ಕ್ಷಣವಾಗಿತ್ತು. ಏಕೆಂದರೆ ಆಸ್ಟ್ರೇಲಿಯ ವಿರುದ್ಧ ಭಾರತದ ಪಂದ್ಯಕ್ಕಾಗಿ ಅಲ್ಲಿ ತೀವ್ರೋತ್ಸಾಹ ತುಂಬಿತ್ತು.

ನಾನು ನನ್ನ ಹಿಂದಿನ ವರ್ಷಗಳ ಬಗ್ಗೆ ಯೋಚಿಸುವಾಗ ಮತ್ತು ಮಹಿಳಾ ಕ್ರಿಕೆಟ್ ಯಾವ ರೀತಿಯ ಪ್ರಗತಿಯನ್ನು ಸಾಧಿಸಿದೆ ಎಂಬುದನ್ನು ಅರಿತುಕೊಳ್ಳುವಾಗ ಆ ಪಂದ್ಯವನ್ನು ನೆನಪಿಸಿಕೊಂಡು ಈಗಲೂ ಪುಳಕಿತಳಾಗುತ್ತೇನೆ. ನಾನು ಇಲ್ಲಿಯವರೆಗಿನ ಎಲ್ಲಾ ಟಿ20 ವಿಶ್ವಕಪ್‌ಗಳಲ್ಲಿ ಆಡಿದ್ದೇನೆ. ವಾಸ್ತವವಾಗಿ ನಾನು 2009ರ ಉದ್ಘಾಟನಾ ಆವೃತ್ತಿಯಲ್ಲಿಯೇ ಈ ಫಾರ್ಮ್ಯಾಟ್‌ನ ನನ್ನ ಮೊದಲ ಪಂದ್ಯವನ್ನು ಆಡಿದೆ ಮತ್ತು ಅದು ಬೆಳೆದ ಬಗೆಯನ್ನು ನೋಡಿದೆ.

ದಕ್ಷಿಣ ಆಫ್ರಿಕಾದಲ್ಲಿ ಈ ವರ್ಷದ ಪಂದ್ಯಾವಳಿ ಅತ್ಯಂತ ಸ್ಪರ್ಧಾತ್ಮಕವಾಗಿರುತ್ತದೆ ಎಂಬುದು ಖಚಿತ. ಆಸ್ಟ್ರೇಲಿಯ ಪಂದ್ಯಾವಳಿಯಲ್ಲಿ ಮೆಚ್ಚಿನ ತಂಡವಾಗುವುದಾದರೂ, ಇತರ ತಂಡಗಳನ್ನು ಬೇರೆಯೆಂದು ನೋಡಲಾಗದು. ತೀವ್ರ ಪೈಪೋಟಿಯ ಪಂದ್ಯಗಳು ಮತ್ತು ಉತ್ತಮ ಮಟ್ಟದ ಪ್ರದರ್ಶನಗಳು ಇದ್ದೇ ಇರಲಿವೆ.

ನಾವು ನಮ್ಮ ಸಾಮರ್ಥ್ಯದಲ್ಲಿ ವಿಶ್ವಾಸ ಹೊಂದಿದ್ದೇವೆ ಮತ್ತು ವಿಶ್ವವನ್ನು ಸೋಲಿಸುವ ಭಾರತೀಯ ತಂಡವಾಗಿ ನೆನಪಿನಲ್ಲುಳಿಯುವಂತಾಗಲು ನಾವು ಒಂದು ಹಂತ ಮುಂದೆ ಹೋಗುವ ಅಗತ್ಯವಿದೆ ಎಂಬುದನ್ನು ಅರ್ಥಮಾಡಿಕೊಳ್ಳುತ್ತೇವೆ.

2005 ಮತ್ತು 2017ರ 50 ಓವರ್‌ಗಳ ವಿಶ್ವಕಪ್ ಪಂದ್ಯಗಳೂ ಸೇರಿ ಭಾರತ ಐಸಿಸಿ ಹಿರಿಯ ಮಹಿಳಾ ಜಾಗತಿಕ ಪಂದ್ಯಗಳಲ್ಲಿ ಮೂರು ಬಾರಿ ಫೈನಲ್‌ಗೆ ತಲುಪಿದೆ. ನಾವು ಯಾವುದೇ ತಂಡವನ್ನು ಸೋಲಿಸುವ ಅಗಾಧ ಭರವಸೆ ಮತ್ತು ವಿಶ್ವಾಸದೊಂದಿಗೆ ಆ ಮೋಹಕ ಪ್ರಶಸ್ತಿಯನ್ನು ಗೆಲ್ಲುವ ಹಸಿವಿದೆ.

19ರೊಳಗಿನ ತಂಡದ ಗೆಲುವು ಇನ್ನಷ್ಟು ಸ್ಫೂರ್ತಿದಾಯಕ. ಯಾವುದೇ ವಿಶ್ವ ಪ್ರಶಸ್ತಿಯನ್ನು ಗೆಲ್ಲುವುದು ಸಣ್ಣ ಸಂಗತಿಯಲ್ಲ ಮತ್ತು ಇದು ಚಾಂಪಿಯನ್‌ಶಿಪ್‌ನ ಮೊದಲ ಆವೃತ್ತಿಯಾಗಿದ್ದರಿಂದ ಇದನ್ನು ಯಾವಾಗಲೂ ನೆನಪಿಸಿಕೊಳ್ಳುತ್ತಾರೆ. ಐತಿಹಾಸಿಕ ಜಯಕ್ಕಾಗಿ ನಾನು ತಂಡವನ್ನು ಅಭಿನಂದಿಸುತ್ತೇನೆ ಮತ್ತು ನಾವೂ ಅವರನ್ನು ಅನುಕರಿಸಬಹುದೆಂದು ಭಾವಿಸುತ್ತೇವೆ.

ನಮ್ಮಲ್ಲಿ ಹಿರಿಯ ಆಟಗಾರರಿರುವಂತೆ ಶಫಾಲಿ ವರ್ಮಾ ಮತ್ತು ರಿಚಾ ಘೋಷ್ ಅವರಂತಹ, 19ರೊಳಗಿನವರ ಭಾರತ ತಂಡದ ಗೆಲುವಿನಿಂದ ಹುರುಪುಗೊಂಡಿರುವ, ಆಕರ್ಷಕವಾಗಿ ಆಡುವ ಮತ್ತು ಈಗ ಉನ್ನತ ದರ್ಜೆಯ ಕ್ರಿಕೆಟ್‌ನಲ್ಲಿಯೂ ಸಾಕಷ್ಟು ಅನುಭವವನ್ನು ಹೊಂದಿರುವ ಯುವಪಟುಗಳೂ ಇದ್ದಾರೆ. ನಾವು ಬ್ಯಾಟಿಂಗ್‌ನಲ್ಲಿ ಹೆಚ್ಚು ಸಮರ್ಥರಾಗಿದ್ದೇವೆ ಮತ್ತು ಬೌಲಿಂಗ್‌ನಲ್ಲಿಯೂ ಸಾಕಷ್ಟು ವೈವಿಧ್ಯತೆ ಹೊಂದಿದ್ದೇವೆ. ರೇಣುಕಾ ಸಿಂಗ್ ಅವರು ಬಲಿಷ್ಠ ತಂಡಗಳನ್ನು ಸಮರ್ಥವಾಗಿ ಎದುರಿಸಬಲ್ಲ ಉತ್ತಮ ವೇಗಿಯಾಗಿದ್ದಾರೆ.

ಚೆನ್ನಾಗಿಯೇ ತಯಾರಿ ನಡೆಸಿದ್ದೇವೆ. ಇತ್ತೀಚಿನ ತಿಂಗಳುಗಳಲ್ಲಿ ನಾವು ಏಶ್ಯಕಪ್ ಮತ್ತು ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಗೆದ್ದಿದ್ದೇವೆ. ಡಿಸೆಂಬರ್‌ನಲ್ಲಿ ಆಸ್ಟ್ರೇಲಿಯ ವಿರುದ್ಧದ ಸ್ವದೇಶಿ ಸರಣಿಯು ನಮ್ಮನ್ನು ಪರೀಕ್ಷಿಸಿಕೊಳ್ಳಲು ಮತ್ತು ಅಗ್ರ ತಂಡಕ್ಕೆ ವಿರುದ್ಧವಾಗಿ ನಮ್ಮ ಸಂಯೋಜನೆಯನ್ನು ಪ್ರಯೋಗಿಸಲು ಅವಕಾಶ ನೀಡಿತು.

ನಾವು ಸರಣಿಯನ್ನು 4-1ರಿಂದ ಸೋತರೂ, ಸರಣಿ ರೋಚಕವಾಗಿದ್ದುದನ್ನು ಮುಂಬೈ ಕ್ರೀಡಾಂಗಣಗಳಲ್ಲಿ ನೆರೆದಿದ್ದ ಸಾವಿರಾರು ಪ್ರೇಕ್ಷಕರು ಕಂಡರು. ಆ ಪಂದ್ಯಗಳಲ್ಲಿನ ಭಾಗವಹಿಸುವಿಕೆ ಇತ್ತೀಚಿನ ದಿನಗಳಲ್ಲಿ ಮಹಿಳಾ ಕ್ರಿಕೆಟ್ ಎಲ್ಲರ ಗಮನ ಸೆಳೆಯುತ್ತಿದೆ ಎಂಬುದನ್ನು ಪ್ರತಿಬಿಂಬಿಸಿತು.

ಇನ್ನು ನಮ್ಮ ಅನುಭವಗಳನ್ನು ಬಳಸಿಕೊಳ್ಳುವುದು, ಹೆಚ್ಚು ಫೋಕಸ್ ಆಗಿ ಆಡುವುದು ಮತ್ತು ನಿರ್ಣಾಯಕ ಘಟ್ಟಗಳಲ್ಲಿ ಅತಿಯಾಗಿ ಭಯಪಡದಿರುವುದು ಇವುಗಳ ಕಡೆ ನಾವು ಗಮನವಿಡಬೇಕಿದೆ. ನಾವು ನಮ್ಮ ಸಾಮರ್ಥ್ಯದಲ್ಲಿ ವಿಶ್ವಾಸ ಹೊಂದಿದ್ದೇವೆ ಮತ್ತು ವಿಶ್ವವನ್ನು ಸೋಲಿಸುವ ಭಾರತೀಯ ತಂಡವಾಗಿ ನೆನಪಿನಲ್ಲುಳಿಯುವಂತಾಗಲು ನಾವು ಒಂದು ಹಂತ ಮುಂದೆ ಹೋಗುವ ಅಗತ್ಯವಿದೆ ಎಂಬುದನ್ನು ಅರ್ಥಮಾಡಿಕೊಳ್ಳುತ್ತೇವೆ.

ಅಂತರ್‌ರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಮತ್ತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯಿಂದ ಮಹಿಳಾ ಕ್ರಿಕೆಟ್‌ಗೆ ವರ್ಷದಿಂದ ವರ್ಷಕ್ಕೆ ಅದ್ಭುತ ಬೆಂಬಲ ಸಿಗುತ್ತಿದೆ. ಮುಂಬರುವ ಮಹಿಳಾ ಐಪಿಎಲ್ ಖಂಡಿತವಾಗಿಯೂ ಭಾರತದಲ್ಲಿ ಆಟವನ್ನು ಉತ್ತಮ ಹಂತಕ್ಕೆ ಕೊಂಡೊಯ್ಯಲಿದೆ. ಮಹಿಳಾ ಕ್ರಿಕೆಟ್ ಕುರಿತ ಹುಮ್ಮಸ್ಸು ಹೆಚ್ಚುತ್ತಿದೆ ಮತ್ತು ಭವಿಷ್ಯ ಎಲ್ಲ ನೆಲೆಯಿಂದಲೂ ಉಜ್ವಲವಾಗಿದೆ.

ದಕ್ಷಿಣ ಆಫ್ರಿಕಾಕ್ಕೆ ಸಂಬಂಧಿಸಿದಂತೆ, ಭಾರತೀಯ ಅಭಿಮಾನಿಗಳ ಪಾಲಿಗೆ ಹಲವಾರು ಉತ್ತಮ ನೆನಪುಗಳಿವೆ. ನಾವು ಅವರನ್ನು ಇನ್ನಷ್ಟು ಹುರಿದುಂಬಿಸಲು ಬಯಸುತ್ತೇವೆ. ಭಾರತೀಯ ಪುರುಷರ ತಂಡ 2003ರ ವಿಶ್ವಕಪ್‌ನ ಫೈನಲ್ ಅನ್ನು ಅಲ್ಲಿ ಆಡಿತು. ಮಹಿಳಾ ತಂಡ 2005ರಲ್ಲಿ ಫೈನಲ್ ಪ್ರವೇಶಿಸಿತು. ನಂತರ ಭಾರತೀಯ ಪುರುಷರ ತಂಡ 2007ರಲ್ಲಿ ಚೊಚ್ಚಲ ಟಿ20 ವಿಶ್ವಕಪ್ ಗೆಲ್ಲುವ ಮೂಲಕ ಉತ್ತಮ ಸಾಧನೆ ಮಾಡಿತು. ನಾವು ಅವರನ್ನು ಮತ್ತೊಮ್ಮೆ ಅನುಕರಿಸಲು ಸಾಧ್ಯವೆ? ಸಮಯ ಮಾತ್ರ ಹೇಳಬಲ್ಲುದಾದರೂ, ನಮಗೆ ಖಂಡಿತವಾಗಿಯೂ ಅದನ್ನು ಸಾಧಿಸುವ ಗುರಿಯಿದೆ.

(ಕೃಪೆ: ಐಸಿಸಿ ಬಿಸಿನೆಸ್ ಕಾರ್ಪೊರೇಷನ್)

Similar News