ಬಾಲ್ಯ ವಿವಾಹ ವಿರುದ್ಧ ಅಸ್ಸಾಂ ಸರಕಾರ ಶಿಸ್ತುಕ್ರಮ: ಮಹಿಳೆಯರಿಂದ ಭಾರೀ ಪ್ರತಿಭಟನೆ

Update: 2023-02-04 04:52 GMT

ಗುವಾಹಟಿ: ಅಸ್ಸಾಂ ಸರಕಾರ ಬಾಲ್ಯವಿವಾಹಗಳ ವಿರುದ್ಧ ಬೃಹತ್ ಶಿಸ್ತುಕ್ರಮವನ್ನು ಆರಂಭಿಸುತ್ತಿದ್ದಂತೆ ತಮ್ಮ ಪತಿ ಹಾಗೂ  ಪುತ್ರರ ಬಂಧನವನ್ನು ವಿರೋಧಿಸಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.

ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಘೋಷಿಸಿದ ರಾಜ್ಯವ್ಯಾಪಿ ಕಾರ್ಯಾಚರಣೆ ಶುಕ್ರವಾರ ಆರಂಭವಾಯಿತು ಮತ್ತು ಮುಂದಿನ ಆರು ದಿನಗಳವರೆಗೆ ಮುಂದುವರಿಯುತ್ತದೆ.

“ಪುರುಷರನ್ನು ಮಾತ್ರ ಏಕೆ ವಶಕ್ಕೆ ಪಡೆಯುತ್ತಿದ್ದೀರಿ? ನಾವು ಹಾಗೂ  ನಮ್ಮ ಮಕ್ಕಳು ಹೇಗೆ ಬದುಕುವುದು? ನಮಗೆ ಆದಾಯದ ಮಾರ್ಗವಿಲ್ಲ'' ಎಂದು ಮಜುಲಿ ಜಿಲ್ಲೆಯ 55 ವರ್ಷದ ನಿರೋದಾ ಡೋಲೆ ಪಿಟಿಐಗೆ ತಿಳಿಸಿದರು.

''ತಮ್ಮ ಮಗ ಅಪ್ರಾಪ್ತ ಬಾಲಕಿಯೊಂದಿಗೆ ಓಡಿಹೋಗಿದ್ದಾನೆ. ಅವನು ತಪ್ಪು ಮಾಡಿದ್ದಾನೆ, ಆದರೆ ನನ್ನ ಗಂಡನನ್ನು ಏಕೆ ಬಂಧಿಸಬೇಕು?" ಎಂದು ಹೆಸರು ಹೇಳಲಿಚ್ಛಿಸದ ಬಾರ್ಪೇಟಾ ಜಿಲ್ಲೆಯ ಮಹಿಳೆಯೊಬ್ಬರು ಪ್ರಶ್ನಿಸಿದರು.

2,000 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ ಮತ್ತು 4,004 ಪ್ರಕರಣಗಳನ್ನು ಇದುವರೆಗೆ ದಾಖಲಿಸಲಾಗಿದೆ. 8,000 ಆರೋಪಿಗಳ ಪಟ್ಟಿಯನ್ನು ಹೊಂದಿದ್ದು, ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗಿಯರನ್ನು ಮದುವೆಯಾದವರನ್ನು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗುವುದು ಮತ್ತು  14-18 ವರ್ಷ ವಯಸ್ಸಿನ ಹುಡುಗಿಯರನ್ನು ಮದುವೆಯಾದವರ ವಿರುದ್ಧ ಬಾಲ್ಯ ವಿವಾಹ ನಿಷೇಧ ಕಾಯ್ದೆ, 2006 ರ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗುವುದು ಎಂದು ರಾಜ್ಯ ಸಚಿವ ಸಂಪುಟ ಇತ್ತೀಚೆಗೆ ನಿರ್ಧರಿಸಿದೆ.

Similar News