ಕೋರ್ಟ್ ನ್ನು ಧಿಕ್ಕರಿಸಿ ಮುಸ್ಲಿಮರ ವಿರುದ್ಧ ಹಿಂಸೆಗೆ ಕರೆ ನೀಡಿದ ಅಮಾನತುಗೊಂಡ ಬಿಜೆಪಿ ಶಾಸಕನಿಗೆ ಪೊಲೀಸರ ನೋಟಿಸ್

Update: 2023-02-04 09:59 GMT

ಮುಂಬೈ,ಫೆ.4: ಬಿಜೆಪಿಯಿಂದ ಅಮಾನತುಗೊಂಡಿರುವ ಹೈದರಾಬಾದ್ನ ಘೋಷಮಹಲ್ ಶಾಸಕ ರಾಜಾಸಿಂಗ್ ( Raja Singh ) ಅವರು ಇತ್ತೀಚಿಗೆ ಮುಂಬೈನ ರ್ಯಾಲಿಯೊಂದರಲ್ಲಿ ತೆಲಂಗಾಣ ಉಚ್ಚ ನ್ಯಾಯಾಲಯದ ಷರತ್ತುಗಳನ್ನು ಉಲ್ಲಂಘಿಸಿ ಮುಸ್ಲಿಮರ ವಿರುದ್ಧ ಹಿಂಸೆಗೆ ಕರೆ ನೀಡಿದ್ದಾರೆ. ಇದಕ್ಕಾಗಿ ಹೈದರಾಬಾದ್ ಪೊಲೀಸರು ಅವರಿಗೆ ನೋಟಿಸ್ಗಳನ್ನೂ ಜಾರಿಗೊಳಿಸಿದ್ದಾರೆ. ನಂತರ ವೀಡಿಯೊವೊಂದನ್ನು ಬಿಡುಗಡೆಗೊಳಿಸಿರುವ ಶಾಸ, ತನಗೆ ಜೈಲಿನ ಬಗ್ಗೆ ಭಯವಿಲ್ಲ ಎಂದು ಹೇಳಿಕೊಂಡಿದ್ದಾರೆ.

ಕಳೆದ ವರ್ಷದ ನವಂಬರ್ ನಲ್ಲಿ ಸಿಂಗ್ ಬಂಧನ ಆದೇಶವನ್ನು ರದ್ದುಗೊಳಿಸಿದ್ದ ಸಂದರ್ಭ ತೆಲಂಗಾಣ ಉಚ್ಚ ನ್ಯಾಯಾಲಯವು ಯಾವುದೇ ಧರ್ಮದ ವಿರುದ್ಧ ಪ್ರಚೋದನಾಕಾರಿ ಭಾಷಣ ಮಾಡದಂತೆ, ಸಾಮಾಜಿಕ ಮಾಧ್ಯಮಗಳಲ್ಲಿ ಅವಹೇಳನಕಾರಿ ಅಥವಾ ಆಕ್ಷೇಪಾರ್ಹ ಪೋಸ್ಟ್ಗಳನ್ನು ಮಾಡದಂತೆ, ಮಾಧ್ಯಮಗಳಿಗೆ ಸಂದರ್ಶನ ನೀಡದಂತೆ ಮತ್ತು ಬಿಡುಗಡೆಯ ಬಳಿಕ ಯಾವುದೇ ಸಂಭ್ರಮಾಚರಣೆ ರ್ಯಾಲಿಗಳನ್ನು ಅಥವಾ ಸಭೆಗಳನ್ನು ನಡೆಸದಂತೆ ಕಟ್ಟುನಿಟ್ಟಿನ ಷರತ್ತುಗಳನ್ನು ವಿಧಿಸಿತ್ತು. ಆದರೆ ಮೂರೇ ತಿಂಗಳುಗಳಲ್ಲಿ ಸಿಂಗ್ ಎಲ್ಲ ಷರತ್ತುಗಳನ್ನು ಉಲ್ಲಂಘಿಸಿದ್ದಾರೆ. ತನ್ನ ವಿರುದ್ಧ 100ಕ್ಕೂ ಅಧಿಕ ಕ್ರಿಮಿನಲ್ ಪ್ರಕರಣಗಳನ್ನು ಹೊಂದಿರುವ ಸಿಂಗ್ ಹೈದರಾಬಾದ್ನಲ್ಲಿ ಕೋಮು ಉದ್ವಿಗ್ನತೆಯನ್ನು ಸೃಷ್ಟಿಸಿದ್ದಕ್ಕಾಗಿ 76 ದಿನಗಳ ಜೈಲುವಾಸವನ್ನೂ ಅನುಭವಿಸಿದ್ದಾರೆ.

ಹಿಂದುತ್ವ ಸಂಘಟನೆ ಸಕಲ ಹಿಂದು ಸಮಾಜ ಜ.29ರಂದು ಮುಂಬೈನಲ್ಲಿ ಆಯೋಜಿಸಿದ್ದ ಹಿಂದು ಜನಾಕ್ರೋಶ ಮೋರ್ಚಾದಲ್ಲಿ ಭಾಗವಹಿಸಿದ್ದ ಸಿಂಗ್,ಮಹಾರಾಷ್ಟ್ರ ಸರಕಾರವು ಮತಾಂತರ ನಿಗ್ರಹ ಕಾಯ್ದೆಯನ್ನು ತರದಿದ್ದರೆ ಹಿಂದುಗಳು ಶೀಘ್ರವೇ ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಳ್ಳಲಿದ್ದಾರೆ ಎಂದು ಘೋಷಿಸಿದ್ದರು.

ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಳ್ಳುವಂತೆ ಮತ್ತು ಮುಸ್ಲಿಮರ ಮೇಲೆ ದಾಳಿಗಳನ್ನು ನಡೆಸುವಂತೆ ಸಿಂಗ್ ಜನರನ್ನು ಪ್ರಚೋದಿಸಿದ್ದರು. ನಿಂದನೀಯ,ಅವಹೇಳನಕಾರಿ ಪದಗಳನ್ನು ಬಳಸಿದ್ದ ಅವರು ಮುಸ್ಲಿಮ್ ಸಮುದಾಯದ ವಿರುದ್ಧ ನೇರ ಹಿಂಸಾಚಾರಕ್ಕೆ ಕರೆ ನೀಡಿದ್ದರು. ಅವರ ಭಾಷಣವು ಉಚ್ಚ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದ್ದು ಮಾತ್ರವಲ್ಲ,ಎರಡು ಧಾರ್ಮಿಕ ಗುಂಪುಗಳ ನಡುವೆ ದ್ವೇಷವನ್ನೂ ಸ್ಪಷ್ಟವಾಗಿ ಉತ್ತೇಜಿಸಿತ್ತು. ಇದು ಐಪಿಸಿಯ ಕಲಂ 153ಬಿ ಮತ್ತು 295ಎ ಅಡಿ ದಂಡನೀಯ ಅಪರಾಧವಾಗಿದೆ.

ಸಿಂಗ್ ಬಳಿಕ ಅಷ್ಟೇ ಪ್ರಚೋದನಾತ್ಮಕ ಭಾಷಣ ಮಾಡಿದ್ದ ಇನ್ನೋರ್ವ ಹಿಂದುತ್ವ ನಾಯಕಿ ಸಾಕ್ಷಿ ಗಾಯಕವಾಡ್ ಅವರು ನರಮೇಧ ದಾಳಿಗೆ ಮತ್ತು ಮುಸ್ಲಿಂ ಸಮುದಾಯವನ್ನು ಬಲಿಗಾಗಿ ಕಾದಿರುವ ಕುರಿಗಳಂತೆ ಪರಿಗಣಿಸಲು ಕರೆ ನೀಡಿದ್ದರು.

ಆರೆಸ್ಸೆಸ್,ಬಜರಂಗ ದಳ ಮತ್ತು ವಿಹಿಂಪನಂತಹ ಬಲಪಂಥೀಯ ಸಂಘಟನೆಗಳ ನಾಯಕರು ಮತ್ತು ಕಾರ್ಯಕರ್ತರು ಮೋರ್ಚಾದಲ್ಲಿ ಭಾಗವಹಿಸಿದ್ದರು. ಸಿಂಗ್ ಮತ್ತು ಇತರರ ಭಾಷಣಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಶೇರ್ ಆಗಿವೆ. ಈ ನಡುವೆ ಹೈದರಾಬಾದ್ನ ಮಂಗಲಹಾಟ್ ಪೊಲೀಸರು ಸಿಂಗ್ ಗೆ ಅವರ ಬಿಡುಗಡೆಗೆ ಷರತ್ತುಗಳನ್ನು ಉಲ್ಲೇಖಿಸಿ ಎರಡು ನೋಟಿಸ್ಗಳನ್ನು ಜಾರಿಗೊಳಿಸಿದ್ದಾರೆ. ಇದಕ್ಕೂ ತಲೆಕೆಡಿಸಿಕೊಳ್ಳದ ಸಿಂಗ್ ವೀಡಿಯೊವೊಂದನ್ನು ಬಿಡುಗಡೆಗೊಳಿಸಿದ್ದು,‘ನಾನು ರಾಜಕೀಯ ನಾಯಕನಲ್ಲ,ನಾನು ಧರ್ಮಕ್ಕಾಗಿ ಹೋರಾಡುತ್ತೇನೆ ಮತ್ತು ಧರ್ಮಕ್ಕಾಗಿ ಬದುಕುತ್ತೇನೆ. ಜೈಲಿಗೆ ಹೋಗಲು ನಾನು ಹೆದರುವುದಿಲ್ಲ,ಹೀಗಿರುವಾಗ ನಿಮ್ಮ ನೋಟಿಸಿಗೆ ಹೆದರುತ್ತೇನೆಯೇ ’ ಎಂದು ಪೊಲೀಸರಿಗೆ ಸವಾಲು ಹಾಕಿದ್ದಾರೆ.

ಸಕಲ ಹಿಂದು ಸಮಾಜ ಫೆ.5ರಂದು ಮುಂಬೈನಲ್ಲಿ ಇಂತಹುದೇ ಇನ್ನೊಂದು ಸಾರ್ವಜನಿಕ ಕಾರ್ಯಕ್ರಮವನ್ನು ಆಯೋಜಿಸಿದೆ. ಸಿಂಗ್ ಮತ್ತು ಗಾಯಕವಾಡ್ ಅವರ ಪ್ರಚೋದನಾತ್ಮಕ ಭಾಷಣಗಳ ಬಳಿಕ ವಕೀಲರೋರ್ವರು ಸಂಘಟನೆಯ ವಿರುದ್ಧ ತಕ್ಷಣ ಕ್ರಮವನ್ನು ಕೋರಿ ಸರ್ವೋಚ್ಚ ನ್ಯಾಯಾಲಯದ (Supreme Court of India) ಮೆಟ್ಟಿಲೇರಿದ್ದರು. ಪ್ರಚೋದನಾಕಾರಿ ಭಾಷಣಗಳನ್ನು ಮಾಡದಂತೆ ಷರತ್ತಿನ ಮೇಲೆ ಮಾತ್ರ ಕಾರ್ಯಕ್ರಮಕ್ಕೆ ಅವಕಾಶ ನೀಡುವಂತೆ ಮತ್ತು ಅದನ್ನು ವೀಡಿಯೊ ಚಿತ್ರೀಕರಿಸುವಂತೆ ಸರ್ವೋಚ್ಚ ನ್ಯಾಯಾಲಯವು ಮಹಾರಾಷ್ಟ್ರ ಸರಕಾರಕ್ಕೆ ಆದೇಶಿಸಿದೆ. 

ಇದನ್ನು ಓದಿ: ದಿಲ್ಲಿ ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅರವಿಂದ ಕೇಜ್ರಿವಾಲ್ ವಿರುದ್ಧ ಬಿಜೆಪಿ ಬೃಹತ್ ಪ್ರತಿಭಟನೆ

Similar News