ಕಾಲ ಕಾಲಕ್ಕೆ ಆರೋಗ್ಯ ತಪಾಸಣೆ ಅಗತ್ಯ: ನ್ಯಾ.ಪಿ.ಎಸ್.ದಿನೇಶ್ ಕುಮಾರ್

Update: 2023-02-04 10:30 GMT

ಉಡುಪಿ, ಫೆ.4: ನಾವು ನಮ್ಮ ಜೀವನದ ಉದ್ದೇಶವನ್ನು ಅರಿತುಕೊಂಡು ಬದುಕು ನಡೆಸಬೇಕು. ಆರೋಗ್ಯ, ಶಿಸ್ತುಬದ್ಧ ಜೀವನವನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ನಾವು ಸಮಾಜದ ಆಸ್ತಿಯಾಗಬೇಕು. ಜೀವನದ ಉದ್ದೇಶ ಸಫಲಗೊಳಿಸಲು ಆರೋಗ್ಯ ಸುಸ್ಥಿತಿಯಲ್ಲಿ ಇರುವುದು ಅಗತ್ಯ. ಇದಕ್ಕಾಗಿ ಕಾಲ ಕಾಲಕ್ಕೆ ಆರೋಗ್ಯ ತಪಾಸಣೆ ಅಗತ್ಯ ಎಂದು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಹೇಳಿದ್ದಾರೆ.

ಉಡುಪಿ ವಕೀಲರ ಸಂಘದ ಆಶ್ರಯದಲ್ಲಿ ಮಣಿಪಾಲ ಕೆಎಂಸಿ ಆಸ್ಪತ್ರೆಯ ಸಹಯೋಗದಲ್ಲಿ ಶನಿವಾರ ವಕೀಲರ ಸಂಘದ ಕಚೇರಿಯಲ್ಲಿ ಆಯೋಜಿಸಲಾದ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಮತ್ತು ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಮಣಿಪಾಲ ಮಾಹೆಯ ಪ್ರೊಚಾನ್ಸಲೆರ್ ಡಾ.ಎಚ್.ಎಸ್.ಬಲ್ಲಾಳ್ ಮಾತನಾಡಿ, ಇಂದು 40ವರ್ಷ ಮೇಲ್ಪಟ್ಟವರಲ್ಲಿ ಆರೋಗ್ಯ ಸಮಸ್ಯೆಗಳು ಕಂಡು ಬರುತ್ತವೆ. ಇದಕ್ಕೆ ಆರೋಗ್ಯ ತಪಾಸಣೆ ಮಾಡುವುದು ಅವಶ್ಯಕ. ಬದಲಾದ ಜೀವನ ಶೈಲಿ, ಒತ್ತಡದಿಂದ ಮಧುಮೇಹ ಸೇರಿದಂತೆ ವಿವಿಧ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ. ಸ್ತನ ಸೇರಿದಂತೆ ಎಲ್ಲ ರೀತಿಯ ಕ್ಯಾನ್ಸರ್‌ಗಳನ್ನು ಆರಂಭದಲ್ಲಿ ಪತ್ತೆ ಹಚ್ಚಿದರೆ ಗುಣಪಡಿಸಲು ಸಾಧ್ಯವಿದೆ ಎಂದು ತಿಳಿಸಿದರು.

ಮಣಿಪಾಲ ಕೆಎಂಸಿಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಮಾತನಾಡಿ, ಮಹಿಳೆಯರು ಥೈರಾಯ್ಡಿ, ಗರ್ಭಕೋಶ, ಸ್ತನ ಕ್ಯಾನ್ಸರ್ ಹಾಗೂ ಪುರುಷರು ಮಧುಮೇಹ, ರಕ್ತದೊತ್ತಡ, ಕೊಬ್ಬಿನಾಂಶದ ಬಗ್ಗೆ ಪರೀಕ್ಷೆ ಮಾಡು ತ್ತಿರಬೇಕು. ಇಂದು ಎಲ್ಲ ಕಡೆಗಳಲ್ಲಿ ರಕ್ತದ ಕೊರತೆ ಕಂಡುಬರುತ್ತಿದೆ. ಇದನ್ನು ನಿಗೀಸಲು ಯುವಜನತೆ ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಲು ಮುಂದೆ ಬರಬೇಕು ಎಂದು ಹೇಳಿದರು.

ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಾಂತವೀರ ಶಿವಪ್ಪ ವಹಿಸಿದ್ದರು. ವಕೀಲರ ಸಂಘದ ಅಧ್ಯಕ್ಷ ಬಿ.ನಾಗರಾಜ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ರೋನಾಲ್ಡ್ ಪ್ರವೀಣ್ ಕುಮಾರ್ ವಂದಿಸಿದರು. ವಕೀಲ ಮುಹಮ್ಮದ್ ಸುಹಾನ್ ಕಾರ್ಯಕ್ರಮ ನಿರೂಪಿಸಿದರು.

Similar News