ಬಂಟಕಲ್: ರಾಕೆಟ್ ತಂತ್ರಜ್ಞಾನದ ಕುರಿತು ಉಪನ್ಯಾಸ

Update: 2023-02-04 10:34 GMT

ಶಿರ್ವ, ಫೆ.4: ರಾಕೆಟ್ ಇಂಜಿನ್‌ಗಳು ಉಪಗ್ರಹಗಳಂತಹ ಪೇಲೋಡ್ ಗಳನ್ನು ನೆಲದಿಂದ ಎತ್ತಲು ಮತ್ತು ಭೂಮಿಯ ಸುತ್ತ ಕಕ್ಷೆಗೆ ಸೇರಿಸಲು ಅಗತ್ಯ ವಾದ ಶಕ್ತಿಯನ್ನು ಒದಗಿಸುತ್ತದೆ. ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವುದರಿಂದ ಬಾಹ್ಯಾಕಾಶದ ಅನ್ವೇಷಣೆ ಸಾಧ್ಯವಾಗಿದೆ. ಚಂದ್ರ ಮತ್ತು ಮಂಗಳ ಗ್ರಹಗಳಿಗೆ ಭೂಮಿಯಿಂದ ಪ್ರಯಾಣ ಮಾಡಲು ಸಹ ಸಾಧ್ಯವಾಗಿದೆ ಎಂದು ಅಮೆರಿಕಾದ ನಾಸಾ ವಿಜ್ಞಾನ ಸಂಸ್ಥೆಯ ನಿವೃತ್ತ ವಿಜ್ಞಾನಿ ಡಾ.ಬಿ.ನರಸಿಂಹ ಭಟ್ ಹೇಳಿದ್ದಾರೆ.

ಬಂಟಕಲ್ಲು ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ಕಾಲೇಜಿನಲ್ಲಿ ಇಂದು ಆಯೋಜಿಸಲಾದ ಕಾರ್ಯಕ್ರಮದಲ್ಲಿ ಅವರು ರಾಕೆಟ್ ತಂತ್ರಜ್ಞಾನದ ಕುರಿತು ಉಪನ್ಯಾಸ ನೀಡಿದರು.

ರಾಕೆಟ್‌ಗಳಲ್ಲಿ ಸಾಮಾನ್ಯವಾಗಿ ಬಳಸುವ ಪ್ರೊಪಲ್ಸನ್ ಸಿಸ್ಟಮ್‌ಗಳ ಪರಿಚಯವನ್ನು ನೀಡಿದ ಅವರು, ರಾಕೆಟ್‌ಗಳನ್ನು ನಿರ್ಮಿಸುವ ಮತ್ತು ಅವುಗಳನ್ನು ಹಾರಿಸುವಾಗ ಅಗತ್ಯವಾಗಿ ತಿಳಿದಿರಬೇಕಾದ ತಾಂತ್ರಿಕ ನಿರ್ವಹಣೆಯ ಬಗ್ಗೆಯೂ ವಿದ್ಯಾರ್ಥಿಗಳಲ್ಲಿ ಚರ್ಚಿಸಿದರು.

ಅಮೆರಿಕಾದ ಮನೋವೈದ್ಯ ಡಾ.ವಾಸುದೇವ ಭಟ್, ಸಂಸ್ಥೆಯ ಪ್ರಾಂಶು ಪಾಲ ಡಾ.ತಿರುಮಲೇಶ್ವರ ಭಟ್, ಉಪಪ್ರಾಂಶುಪಾಲ ಡಾ.ಗಣೇಶ್ ಐತಾಳ್, ವಿವಿಧ ವಿಭಾಗದ ಮುಖ್ಯಸ್ಥರು, ಅಧ್ಯಾಪಕರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರಾಧ್ಯಾಪಕಿ ಲಹರಿ ವೈದ್ಯ ಕಾರ್ಯಕ್ರಮ ನಿರೂಪಿಸಿದರು.

Similar News